Advertisement

ಆಡಳಿತದ ಆಯಕಟ್ಟಲ್ಲೂ ಹಿಂದಿ ಹೇರಿಕೆ

11:43 AM Mar 19, 2018 | |

ಬೆಂಗಳೂರು: ಹಿಂದಿ ಹೇರಿಕೆ ಕೇವಲ ಮೆಟ್ರೋ ಫ‌ಲಕಗಳಿಗೆ ಸೀಮಿತವಾಗಿಲ್ಲ; “ನಮ್ಮ ಮೆಟ್ರೋ’ ಒಳಗೂ ಹಬ್ಬಿದೆ. ಮೆಟ್ರೋ ಸಿಬ್ಬಂದಿ ಪ್ರಸ್ತುತ ನಡೆಸಲು ಮುಂದಾಗಿರುವ ಮುಷ್ಕರಕ್ಕೆ ಈ “ಹೇರಿಕೆ’ ಕೂಡ ಪ್ರಮುಖ ಕಾರಣವಾಗಿದೆ.

Advertisement

ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆ ಹುದ್ದೆಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ಹಾಗೂ ಆಡಳಿತ ಮಂಡಳಿಯಲ್ಲಿದ್ದವರೆಲ್ಲಾ ಕನ್ನಡೇತರರು. ಇವರೆಲ್ಲಾ ಉದ್ದೇಶಪೂರ್ವಕವಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಮುಷ್ಕರಕ್ಕೆ ಕರೆ ನೀಡಿರುವ ಸಿಬ್ಬಂದಿಯ ಆರೋಪ. ಇದು ಮುಷ್ಕರದ ರೂಪದಲ್ಲಿ ಭುಗಿಲೆದ್ದಿದೆ.

ನಿಗಮದ ಆಡಳಿತ ಮಂಡಳಿಯ ಪ್ರಮುಖ ಹುದ್ದೆಗಳಲ್ಲಿ 9 ಅಧಿಕಾರಿಗಳಿದ್ದು, ಈ ಪೈಕಿ 6 ಜನ ಕನ್ನಡೇತರರು. ಸ್ವತಃ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಈ ಹಿಂದೆ ಬಿಎಂಆರ್‌ಸಿಯಲ್ಲಿ ಕನ್ನಡ ಅನುಷ್ಠಾನದ ಕುರಿತ ಪರಿಶೀಲನೆ ನಡೆಸಿದ ವೇಳೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅದೇ ರೀತಿ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 29 ಹುದ್ದೆಗಳ ಪೈಕಿ ಪೈಕಿ 18 ಜನ ಕನ್ನಡೇತರರಿದ್ದಾರೆ.

ಕಿರುಕುಳ ಆರೋಪ: “ಇದು ಇಷ್ಟಕ್ಕೇ ಸೀಮಿತವಾಗಿದ್ದರೆ, ಬೇಸರ ಆಗುತ್ತಿರಲಿಲ್ಲ. ಆದರೆ, ಈ ಉನ್ನತ ಹುದ್ದೆಯಲ್ಲಿರುವವರು ನೀಡುತ್ತಿರುವ ಕಿರುಕುಳ ಸಿಬ್ಬಂದಿಯಲ್ಲಿ ಸಿಟ್ಟು ತರಿಸಿದೆ. ಎರಡು-ಮೂರು ವರ್ಷಗಳಿಂದಲೂ ಈ ಅಸಮಾಧಾನದ ಹೊಗೆಯಾಡುತ್ತಿದೆ. ಸೇವಾ ಹಿರಿತನದ ಮೇಲೆ ಸ್ವಾಭಾವಿಕವಾಗಿ ಬಡ್ತಿ ಬರುವಷ್ಟರಲ್ಲಿ ಆ ಸ್ಥಾನಕ್ಕೆ ಮತ್ತೂಬ್ಬರನ್ನು ನಿಯೋಜಿಸಲಾಗುತ್ತದೆ.

ಪರಿಣಾಮ ಮತ್ತೆ ನಾವು ಅವಕಾಶ ವಂಚಿತರಾಗುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಉದ್ಯೋಗಿಯೊಬ್ಬರು ತಿಳಿಸಿದರು. ಮೆಟ್ರೋದಲ್ಲಿ ಹಿಂದಿ ಫ‌ಲಕಗಳ ವಿರುದ್ಧ ದೊಡ್ಡ ಹೋರಾಟ ನಡೆಯಿತು. ಆದರೆ, “ನಮ್ಮ ಮೆಟ್ರೋ’ ಒಳಗೇ ವ್ಯವಸ್ಥಿತ ದಬ್ಟಾಳಿಕೆ ನಡೆಯುತ್ತಿದೆ. ಸಂದರ್ಶನಕ್ಕೆ ಬಂದವರನ್ನು ನಿಂದನೆ ಮಾಡಿ ಕಳುಹಿಸಲಾಗುತ್ತಿದೆ ಎಂದು ಅವರು ದೂರಿದರು.

Advertisement

ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು-9 
ಕನ್ನಡೇತರ-6
ಪ್ರಧಾನ ವ್ಯವಸ್ಥಾಪಕರು- 12
ಕನ್ನಡೇತರ- 3
ಮುಖ್ಯ ಎಂಜಿನಿಯರ್‌- 12
ಕನ್ನಡೇತರ- 9
ಹೆಚ್ಚುವರಿ ಮುಖ್ಯ ಎಂಜಿನಿಯರ್‌- 8
ಕನ್ನಡೇತರ- 1 
ಉಪ ಮುಖ್ಯ ಎಂಜಿನಿಯರ್‌/ ಉಪ ಪ್ರಧಾನ ವ್ಯವಸ್ಥಾಪಕರು- 41
ಕನ್ನಡೇತರ- 18
ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಪ್ರಧಾನ ಮತ್ತು ಉಪ ಪ್ರಧಾನ ವ್ಯವಸ್ಥಾಪಕರು- 29
ಕನ್ನಡೇತರ- 18

ಹೆಸರಿಗೆ ಮಾತ್ರ “ನಮ್ಮ ಮೆಟ್ರೋ’: ಹೆಸರಿಗೆ ಮಾತ್ರ “ನಮ್ಮ ಮೆಟ್ರೋ’. ಆದರೆ, ವಾಸ್ತವವಾಗಿ ಇದು ನಮ್ಮದಲ್ಲ. ಸರೋಜಿನಿ ಮಹಿಷಿ ವರದಿ ಜಾರಿ ಜತೆಗೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ.

ಆದರೆ, ಸರ್ಕಾರಿ ಸಂಸ್ಥೆಯಲ್ಲೇ ಇದು ಅನುಷ್ಠಾನವಾಗುತ್ತಿಲ್ಲ. ಉನ್ನತ ಹುದ್ದೆಯಲ್ಲಿರುವವರ ಲಾಬಿ ಬಗ್ಗೆ ಸರ್ಕಾರ ಗಮನಹರಿಸುವ ಅಗತ್ಯವಿದೆ. ಈ ಅನ್ಯಾಯದ ವಿರುದ್ಧ ಚರ್ಚಿಸಿ, ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಬನವಾಸಿ ಬಳಗದ ಸದಸ್ಯ ಅರುಣ್‌ ಜಾವಗಲ್‌ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಫೋಟೋ ತನ್ನಿ!: ಸಂಬಂಧಿಕರು ನಿಧನರಾದಾಗ ರಜೆ ಕೂಡ ಕೊಡುವುದಿಲ್ಲ. “ನೀನು ಹೇಳುತ್ತಿರುವುದನ್ನು ಹೇಗೆ ನಂಬುವುದು? ಮೃತ ವ್ಯಕ್ತಿಯ ಫೋಟೋ ಕಳಿಸುತ್ತೀಯಾ’ ಎಂದು ಕೇಳುತ್ತಾರೆ. ವಾಸ್ತವವಾಗಿ ಇದು ಸಾಧ್ಯವೇ? ಈ ಬಗ್ಗೆ ಪ್ರಶ್ನಿಸಿದರೆ ನೋಟಿಸ್‌ ಜಾರಿ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಸಿಬ್ಬಂದಿಯೊಬ್ಬರ ಮಗುವಿನ ಹೃದಯದಲ್ಲಿ ರಂದ್ರವಿರುವುದು ಪತ್ತೆಯಾಗಿದ್ದು,

ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿದರು. ಇದಕ್ಕೆ ಆರ್ಥಿಕ ನೆರವು ದೊರೆಯಬಹುದು ಎಂಬ ನಿರೀಕ್ಷೆಯಿಂದ ಹೋದರೆ, “ನಮ್ಮನ್ನು ಕೇಳಿ ಮಕ್ಕಳಿಗೆ ಹುಟ್ಟಿಸಿದ್ದೀರಾ?’ ಎಂದು ಅಮಾನವೀಯವಾಗಿ ಕೇಳುತ್ತಾರೆ. ಈ ಎಲ್ಲ ಆಕ್ರೋಶವೂ ಬೂದಿ ಮುಚ್ಚಿದ ಕೆಂಡದಂತಿತ್ತು. ಈಗ ಮುಷ್ಕರ ರೂಪದಲ್ಲಿ ಹೊರಹೊಮ್ಮಿದೆ ಎಂದು ಮತ್ತೂಬ್ಬ ಉದ್ಯೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಈ ಹಿಂದೆಯೂ ಅನ್ಯಭಾಷಿಕರ ಹೇರಿಕೆ ಬಗ್ಗೆ ನೇರವಾಗಿ ನಿಗಮಕ್ಕೆ ತಿಳಿಸಿದ್ದೆ. ಈಗಲೂ ವ್ಯವಸ್ಥೆ ಸರಿಪಡಿಸದಿದ್ದರೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ಇಂಥ ಬೆಳವಣಿಗೆಗಗಳು ಒಕ್ಕೂಟ ವ್ಯವಸ್ಥೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ. ಆದ್ದರಿಂದ ನಿಗಮದ ಉನ್ನತ ಹುದ್ದೆಯಲ್ಲಿರುವವರು ತಮ್ಮ ರಾಜ್ಯದ ಮೋಹ ಬಿಟ್ಟು ಈ ನೆಲಕ್ಕೆ ಬದ್ಧತೆ ತೋರಿಸುವುದು ಕರ್ತವ್ಯ.
-ಪ್ರೊ. ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next