Advertisement

137 ಕೋಟಿ ರೂ.ನಲ್ಲಿ ಹಿಮ್ಸ್‌ ಮೇಲ್ದರ್ಜೆಗೆ

01:09 PM Jul 02, 2018 | Team Udayavani |

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನು 135 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದು, ಹಣಕಾಸು ಇಲಾಖೆಯೂ ಸಮ್ಮತಿ ಸೂಚಿಸಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Advertisement

ಹಾಸನ ವೈದ್ಯಕೀಯ ಕಾಲೇಜು ವಿದಾರ್ಥಿನಿಲಯ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಆಸ್ಪತ್ರೆಯ ಮೇಲ್ದರ್ಜೆ ಗೇರಿಸುವ ಕಾಮಗಾರಿಯನ್ನು ಮೂರು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ವರ್ಷ 50 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಲಿದೆ ಎಂದು ವಿವರಿಸಿದರು.

ವೈದ್ಯಕೀಯ ಕಾಲೇಜಿನ ಎಲ್ಲಾ ತರಗತಿಗಳಿಂದ ಒಟ್ಟು 750 ವಿದ್ಯಾರ್ಥಿಗಳಿದ್ದು, ಇನ್ನೂ 300 ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕೊರತೆ ಇದೆ. ಹಾಗಾಗಿ 24 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಬದಲು ವಸತಿಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವೈದ್ಯಕೀಯ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ನೆರವು ನೀಡಲಾಗುವುದು. ಅಗತ್ಯವಿರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮ ಕಾತಿಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಸಚಿವ ರೇವಣ್ಣ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ, ಹಾಸನದ ಮೆಡಿಕಲ್‌ ಕಾಲೇಜನ್ನು ರಾಜ್ಯದಲ್ಲಿಯೇ ನಂ.1 ಮೆಡಿಕಲ್‌ ಕಾಲೇಜು ಎಂದು ಹೆಸರು ಪಡೆಯಲು ಶ್ರಮಿಸಬೇಕು ಎಂದು ತಾಕೀತು ಮಾಡಿದರು.

ರೈತರ ಸಾಲ ಮನ್ನಾ ಖಚಿತ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚುನಾವಣೆ ಪೂರ್ವದಲ್ಲಿ ಭರವಸೆ
ನೀಡಿದಂತೆ ರೈತರ ಕೃಷಿ ಸಾಲ ಮನ್ನಾ ಮಾಡಲು ಬದ್ಧರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದು. ಆದ್ದರಿಂದ ಮಿತ್ರ ಪಕ್ಷ ಕಾಂಗ್ರೆಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ ಎಂದು ಹೇಳಿದರು.

Advertisement

ಶಾಸಕ ಪ್ರೀತಂ ಜೆ.ಗೌಡ, ಹಾಸನ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್‌, ಆಡಳಿತಾಧಿಕಾರಿ ಚಿದಾನಂದ, ನಗರಸಭೆ ಅಧ್ಯಕ್ಷ ಡಾ.ಎಚ್‌.ಎಸ್‌. ಅನಿಲ್‌ಕುಮಾರ್‌, ಆಯುಕ್ತ ಬಿ.ಎ.ಪರಮೇಶ್‌, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ರಾಜ್‌ಕುಮಾರ್‌ ಅವರೂ ಉಪಸ್ಥಿತರಿದ್ದರು

ಚಾರ್ಮಾಡಿ ಘಾಟಿ ಅಭಿವೃದ್ಧಿಗೆ ಶೀಘ್ರ ಪ್ರಸ್ತಾವನೆ 
ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ, ಶಿರಾಡಿ, ಆಗುಂಬೆ ಘಾಟಿಗಳಲ್ಲಿ ರಸ್ತೆ ಪರಿಶೀಲನೆ ನಡೆಸಿದ್ದೇನೆ. ಒಂದು ಅಂದಾಜು ಪಟ್ಟಿಯನ್ನೂ ಈಗಾಗಲೇ ಕಳುಹಿಸಿದ್ದೇನೆ ಎಂದು ವಿವರಿಸಿದರು.

ಮಳೆ ಕಡಿಮೆ ಆದ ಮೇಲೆ ತಡೆಗೋಡೆ ನಿರ್ಮಾಣ ಮತ್ತು ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಮಳೆಗಾಲದ ನಂತರ ಪಕ್ಕಾ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗುವುದು. ಎಲ್ಲೆಲ್ಲಿ ವಿಸ್ತರಣೆಗೆ ಸಾಧ್ಯವೋ ಅಲ್ಲಿ ರಸ್ತೆ ವಿಸ್ತರಿಸಲಾಗುವುದು. ಎಲ್ಲ ಕಡೆ ವಿಸ್ತರಿಸಲು ತಳಭಾಗದಲ್ಲಿ ಮಣ್ಣು ತೆಗೆದರೆ ಮೇಲಿಂದ ಕುಸಿಯುವ ಅಪಾಯವಿದೆ ಎಂದರು.

ಬಿಳಿಕೆರೆಯಿಂದ ಬೇಲೂರಿನವರೆಗೆ ಎರಡು ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಚಿಕ್ಕಮಗಳೂರಿನಿಂದ ಬೇಲೂರು ರಸ್ತೆಯನ್ನೂ ಹೆದ್ದಾರಿಯಾಗಿ ಪರಿವರ್ತಿ ಸುವ ಪ್ರಸ್ತಾಪವಿದೆ ಎಂದರು.

ಹೊಸ ರೈಲ್ವೆ ಮಾರ್ಗ: ಈಗಾಗಲೇ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗದ ಕಾಮಗಾರಿಗೆ ಅನುಮತಿ ದೊರೆತಿದೆ. ಬೇಲೂರಿನಿಂದ ಹಾಸನಕ್ಕೆ ಕೇವಲ 30 ಕಿ.ಮೀ. ಮಾತ್ರ ಆಗುತ್ತದೆ. ಈ ಕಾಮಗಾರಿಯ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಿಂದಿನ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರೊಂದಿಗೆ ಚರ್ಚಿಸಿದ್ದರು. ಈಗ ಈ ಕಾಮಗಾರಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿರುವುದಾಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಮಳೆ ಬಂದಾಗ ನೀರಿನಲ್ಲಿ ಮುಳುಗುವ ಕಳಸ ಹೊರನಾಡು ರಸ್ತೆಯಲ್ಲಿರುವ ಹೆಬ್ಟಾಳೆ ಸೇತುವೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಶೃಂಗೇರಿ, ಹೊರನಾಡು ಧಾರ್ಮಿಕ ಕೇಂದ್ರಗಳಾಗಿರುವುದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು.

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಪ್ರದೇಶವಾಗಿರುವುದರಿಂದ ಇಲ್ಲಿನ ಕೆಲವು ರಸ್ತೆಗಳಿಗೆ ಪ್ರಾಮು
ಖ್ಯತೆ ಕೊಡಲೇಬೇಕಿದೆ. ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸುತ್ತೇನೆ. ಕರಾವಳಿಗೆ ಸಂಪರ್ಕಕಲ್ಪಿಸುವ ಶಿಶಿಲಾ ಬೈರಾಪುರ ರಸ್ತೆ ಅಭಿ ವೃದ್ಧಿಪಡಿಸುವ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ ಎಂದರು. ಬೇಲೂರು ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ. ಚ.ಅನಂತಸುಬ್ಬರಾಯ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next