ಶಿಮ್ಲಾ:ಅರವತ್ತೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಶನಿವಾರ ಮತದಾನ ನಡೆಯಲಿದೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್, ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿದಂತೆ 412 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 55 ಲಕ್ಷ ಮಂದಿ ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ. ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.
1998ರ ಚುನಾವಣೆ ಬಳಿಕ ರಾಜ್ಯದಲ್ಲಿ ಒಂದು ಬಾರಿ ಕಾಂಗ್ರೆಸ್, ಮತ್ತೊಂದು ಬಾರಿ ಬಿಜೆಪಿ ಹೀಗೆ ಆವರ್ತನ ಪದ್ಧತಿಯಲ್ಲಿ ಪಕ್ಷಗಳ ಸರ್ಕಾರ ರಚನೆಯಾಗುತ್ತಿತ್ತು. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಆ ಪದ್ಧತಿಗೆ ಪೂರ್ಣ ವಿರಾಮ ಹಾಕಿ, ಅಧಿಕಾರ ಉಳಿಸಿಕೊಳ್ಳಲೇಬೇಕು ಎಂದು ಬಿಜೆಪಿ ಪಣ ತೊಟ್ಟಿದೆ. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಪ್ರಚಾರದ ನೇತೃತ್ವ ವಹಿಸಿದ್ದರು.
ಪ್ರತಿಪಕ್ಷ ಕಾಂಗ್ರೆಸ್‌ಗೆ 2 ಲೋಕಸಭೆ ಚುನಾವಣೆಗಳಲ್ಲಿ, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಪುದುಚ್ಚೇರಿ, ಪಂಜಾಬ್, ಉ.ಪ್ರ, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಉಂಟಾಗಿದೆ. ಹೀಗಾಗಿ, ಪ್ರಸಕ್ತ ಸಾಲಿನ ಫಲಿತಾಂಶ ಮಹತ್ವ ಪೂರ್ಣವಾಗಿದೆ.