ಶಿಮ್ಲಾ: ಹಿಮಾಚಲ ಪ್ರದೇಶದ 68 ಕ್ಷೇತ್ರ ಗಳಿಗೆ 12ರಂದು ಮತದಾನ ನಡೆಯಲಿದ್ದು, ಗುರುವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಬಹುತೇಕ ಎಲ್ಲ ಸಮೀಕ್ಷೆಗಳೂ ಬಿಜೆ ಪಿಯೇ ರಾಜ್ಯದಲ್ಲಿ ಮತ್ತೆ ಅಧಿಕಾರ ಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಹಳೆಯ ಪಿಂಚಣಿ ಯೋಜನೆ ಸೇರಿದಂತೆ ಜನರಿಗೆ ಹತ್ತಿರವಾದಂಥ ಕೆಲವು ವಿಚಾರಗಳನ್ನು ಎತ್ತಿ ಕಾಂಗ್ರೆಸ್ ಕೂಡ ತೀವ್ರ ಪ್ರಚಾರ ನಡೆಸಿರುವ ಕಾರಣ, ಫಲಿತಾಂಶ ಕುತೂಲಹ ಮೂಡಿಸಿದೆ.
ಕೊನೆಯ ದಿನವಾದ ಗುರುವಾರ ಕಾಂಗ್ರೆಸ್ ಎಲ್ಲ 68 ಕ್ಷೇತ್ರಗಳಲ್ಲೂ ವಿಜಯ್ ಆಶೀರ್ವಾದ್ ರ್ಯಾಲಿಯನ್ನು ನಡೆಸಿದೆ. ಪ್ರಿಯಾಂಕಾ ವಾದ್ರಾ ಅವರು ಮನೆ ಮನೆ ಪ್ರಚಾರವನ್ನೂ ನಡೆಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರು ರ್ಯಾಲಿ ನಡೆಸಿದ್ದಾರೆ.
Related Articles
ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಮಾಡುವ ಮೂಲಕ ಬಿಜೆಪಿ, ಹಿರಿಯ ನಾಗರಿಕರ ಆರ್ಥಿಕ ಭದ್ರತೆ ಕಿತ್ತುಕೊಂಡಿದೆ. ಜೀವನದುದ್ದಕ್ಕೂ ದೇಶಕ್ಕಾಗಿ ಸೇವೆ ಸಲ್ಲಿಸಿದವರು, ವಯಸ್ಸಾದಾಗ ಏನು ಮಾಡಬೇಕು? ಪಕ್ಷ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಮರು ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಆಶ್ವಾಸನೆ ನೀಡಿದ್ದಾರೆ.
ಇದೇ ವೇಳೆ, ಬಿಜೆಪಿಯನ್ನು ಮರು ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿ ಎಂದು ಪ್ರಧಾನಿ ಜನತೆಗೆ ಪತ್ರ ಬರೆದಿದ್ದಾರೆ. ಬಿಜೆಪಿಗೆ ನೀವು ಚಲಾಯಿಸುವ ನನ್ನ ಶಕ್ತಿಯನ್ನು ವೃದ್ಧಿಸಲಿದೆ ಎಂದಿದ್ದಾರೆ.
ಘನತೆ ಇರುವವರ ಆಶ್ವಾಸನೆ ನಂಬುತ್ತಾರೆ:
ಹಿಮಾಚಲದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಕಾಂಗ್ರಾದ ರ್ಯಾಲಿಯಲ್ಲಿ ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಘನತೆಯಿರುವವರ ಆಶ್ವಾಸನೆಗಳನ್ನು ಜನ ನಂಬುತ್ತಾರೆಯೇ ಹೊರತು, ಘನತೆಯೇ ಇಲ್ಲದವರನ್ನಲ್ಲ’ ಎಂದು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಬಿಜೆಪಿ ಅವಧಿಯಲ್ಲಿ ಹಗರಣಗಳನ್ನು ಹುಡುಕುವುದೇ ಕಷ್ಟ ಎಂದರು.
ದೌರ್ಬಲ್ಯ ಅಲ್ಲ ಶಕ್ತಿ: ಖರ್ಗೆ :
ಹಿ.ಪ್ರ.ದಲ್ಲಿ ಸಿಎಂ ಹುದ್ದೆಗೆ ಹಲವು ಆಕಾಂಕ್ಷಿಗಳಿರುವುದು ಕಾಂಗ್ರೆಸ್‌ನ ಶಕ್ತಿಯೇ ಹೊರತು, ಅದು ನಮ್ಮ ದೌರ್ಬಲ್ಯವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸಂದರ್ಶನ ವೊಂದರಲ್ಲಿ ಮಾತನಾಡಿದ ಖರ್ಗೆ, “ಬಿಜೆಪಿಯು ಕೇವಲ ಪ್ರಧಾನಿ ಮೋದಿ ಹೆಸರಲ್ಲಿ ಚುನಾವಣೆ ಎದುರಿಸುತ್ತಿದೆ. ಏಕೆಂದರೆ, ಸಿಎಂ ಜೈರಾಂ ಠಾಕೂರ್ ವೈಫಲ್ಯದ ಬಗ್ಗೆ ಬಿಜೆಪಿಗೆ ಅರಿವಿದೆ ಎಂದು ಲೇವಡಿ ಮಾಡಿದ್ದಾರೆ.