ಜಮಖಂಡಿ: ಮರೆಗುದ್ದಿ ಗ್ರಾಮದ 200ಕ್ಕೂ ಹೆಚ್ಚು ಭಕ್ತರು ಕಾಲ್ನಡಿಗೆ ಮೂಲಕ ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಕ್ಕೆ ತೆರಳಿ ದರ್ಶನ ಪಡೆದುಕೊಳ್ಳುವ ಪರಂಪರೆ ಕಳೆದ 22 ವರ್ಷಗಳಿಂದ ಚಾಲನೆಯಲ್ಲಿದೆ. ಶ್ರೀಶೈಲ ಮಲ್ಲಿಕಾರ್ಜುನ ಜೊತೆಗೆ ಮರೆಗುದ್ದಿ ಗ್ರಾಮದ ಭಕ್ತರ ಅವಿನಾಭಾವ ಸಂಬಂಧವಿದೆ.
ಕಳೆದ 21 ವರ್ಷಗಳಿಂದ ನಿರಂತರ ಪಾದಯಾತ್ರೆ ಮಾಡುತ್ತಿದ್ದು, ಪ್ರತಿ ವರ್ಷ 14 ದಿನಗಳ ಒಳಗಾಗಿ ಕಾಲ್ನಡಿಗೆ ಮೂಲಕ ಶ್ರೀಶೈಲ ತಲುಪುತ್ತಾರೆ. ಅಂದು ಕೆಲವು ಭಕ್ತರಿಂದ ಆರಂಭಗೊಂಡ ಪಾದಯಾತ್ರೆ ಇಂದು ನೂರಾರು ಭಕ್ತರನ್ನು ಹೊಂದಿದ್ದು, ಪುರುಷರು, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸರ್ವರೂ ದರ್ಶನ ಪಡೆಯುತ್ತಿದ್ದಾರೆ.
ಮರೆಗುದ್ದಿ ಗ್ರಾಮದಲ್ಲಿ ಮಾ.17ರಂದು ರಾತ್ರಿ ಮಲ್ಲಯ್ಯ ಕಂಬಿಗಳಿಗೆ ಗ್ರಾಮಸ್ಥರಿಂದ ಮಂಗಳಾರತಿ, ವಿಶೇಷ ಪೂಜೆ ಮೂಲಕ ಆರಂಭಗೊಳ್ಳುವ ಪಾದಯಾತ್ರೆಯ ಭಕ್ತರು ಹಲಗಲಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೊದಲ ವಾಸ್ತವ್ಯ ಮಾಡಲಿದ್ದಾರೆ. ಮರುದಿನ ಶಿರೂರ, ಕರಡಿ, ಸುಲ್ತಾನಪುರ, ದಿದ್ದಗಿ, ಆಳೇರಿ, ನಂದವಾಡಂ, ಬ್ರಹ್ಮಕಟ್ಟು, ಬನ್ನೂರ, ಕಡೇಬಾಗಿಲ ವಸ್ತಿ ಮಾಡುವ ಮೂಲಕ ಮರುದಿನ ಬೆಳಗ್ಗೆ ಶ್ರೀಶೈಲ ಕ್ಷೇತ್ರ ತಲುಪಲಿದ್ದಾರೆ.
ಗ್ರಾಮದ ಪ್ರಮುಖರಾದ ಬಸವರಾಜ ಗಿರಗಾವಿ, ರಾಚಪ್ಪ ಹೊನ್ನಾಳೆ, ಪರಮಾನಂದ ಗುಡಿ, ಎಂ.ಆರ್. ಅಥಣಿ, ಹನಮಂತ ಕನಕನ್ನವರ, ಶಿವನಗೌಡ ಪಾಟೀಲ, ಸುರೇಶ ಹಕ್ಕಿ, ಹನಮಂತ ತಳವಾರ, ಯಮನಪ್ಪ ಹಳಿಂಗಳಿ ನೇತೃತ್ವದಲ್ಲಿ ಪ್ರತಿವರ್ಷ ಪಾದಯಾತ್ರೆ ನಡೆಯುತ್ತಿದೆ.
ಪಾದಯಾತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಅರಿತು ಗ್ರಾಮಸ್ಥರು ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡುತ್ತಾರೆ. ಮರೆಗುದ್ದಿ ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಶ್ರೀಶೈಲ ಪಾದಯಾತ್ರೆಗಳಿಗೆ ಹಲಗಲಿ, ಅನಗವಾಡಿ ಮತ್ತು ಶ್ರೀಶೈಲದಲ್ಲಿ ದಾಸೋಹ ವ್ಯವಸ್ಥೆ ಪರಂಪರೆ ರೂಢಿಸಿಕೊಂಡು ಬಂದಿದ್ದಾರೆ.
ಮರೇಗುದ್ದಿ ಗ್ರಾಮದ ಜಂಗಮರಾದ ಶಿವನಿಂಗಯ್ಯ ಮಠಪತಿ, ಕಾಡಯ್ಯ ಮಠಪತಿ ಶ್ರೀಶೈಲ ಪಾದಯಾತ್ರೆಯಲ್ಲಿ ಕಂಬಿಗಳ ಜೊತೆಗೆ ನೂರಾರು ಭಕ್ತರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಸತತ 12 ದಿನಗಳ ಪಾದಯಾತ್ರೆಯಲ್ಲಿ ಪೂಜೆ, ಭಜನೆ, ಮಂಗಳಾರತಿ ನಡಯುತ್ತಿವೆ.
ಶ್ರೀಶೈಲಕ್ಕೆ ದಿಂಡಿ ಪಾದಯಾತ್ರೆ ಬಾದಾಮಿ: ಖಾಜೀಬೂದಿಹಾಳ ಗ್ರಾಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಪುಣ್ಯಸ್ಥಳಕ್ಕೆ ಕಂಬಿ (ದಿಂಡಿ)ಯೊಂದಿಗೆ ಮಾ.18ರಂದು ಪಾದಯಾತ್ರೆ ತೆರಳಲಿದೆ ಎಂದು ಸಂಚಾಲಕ ಸಂಗಮೇಶ ಸಾಳಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.