Advertisement

ಏರಿದೆ ಪೆಟ್ರೋಲ್‌ ಬಿಸಿ

06:55 AM Sep 14, 2017 | |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಚಾ ತೈಲ ದರ ಪಾತಾಳಮುಖೀ ಯಾಗುತ್ತಿದ್ದರೂ ಭಾರತದಲ್ಲಿ ಮಾತ್ರ ತೈಲ ದರ ಗಗನಮುಖೀಯಾಗುತ್ತಲೇ ಇದೆ!

Advertisement

ಬುಧವಾರಕ್ಕೆ ಅನ್ವಯವಾಗುವಂತೆ ಬೆಂಗಳೂರಿ ನಲ್ಲಿ ಪೆಟ್ರೋಲ್‌ ಬೆಲೆ 71.45 ರೂ. ಹಾಗೂ ಡೀಸೆಲ್‌ 58.80 ರೂ.ಗಳಾಗಿವೆ. ಅದೇ ರೀತಿ ದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 70.35 ರೂ. ಇದ್ದರೆ, ಡೀಸೆಲ್‌ 58.70 ರೂ.ಗಳಾಗಿವೆ. ಸರಿಯಾಗಿ ಇದು ಮೂರು ವರ್ಷಗಳಲ್ಲೇ ಅತ್ಯಂತ ಹೆಚ್ಚಿನದ್ದು. ಅಂದರೆ 2014ರಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇದೇ ಮಾದರಿಯಲ್ಲಿ ಇತ್ತು. 2014ರ ಆಗಸ್ಟ್‌ 31ರಂದು ಪೆಟ್ರೋಲ್‌ 68.51 ರೂ. ಇದ್ದರೆ, ಡೀಸೆಲ್‌ 58.14 ರೂ. ಇತ್ತು.

ಇಲ್ಲಿ ಗಮನಹರಿಸಬೇಕಾದ ಸಂಗತಿ ಎಂದರೆ, 2014ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಇದ್ದ ಕಚ್ಚಾ ತೈಲದ ದರ 101 ಡಾಲರ್‌ ಇದ್ದರೆ, ಈಗ 53.63 ಡಾಲರ್‌ ಇದೆ. ಇದರರ್ಥ ಸರಿಯಾಗಿ ಅರ್ಧಕ್ಕೆ ಅರ್ಧ ದರ ಇಳಿಕೆಯಾಗಿದೆ. ಆದರೂ ತೈಲ ಕಂಪೆನಿಗಳು ಗ್ರಾಹಕರಿಗೆ ಮಾತ್ರ ತೈಲ ದರ ಇಳಿಕೆ ಮಾಡದೆ‌, ಭಾರೀಯಾಗಿಯೇ 
ದರ ವಿಧಿಸುತ್ತಿವೆ.

ಇದಕ್ಕಿಂತ ಹೆಚ್ಚಾಗಿ ಜುಲೈ 1ರಂದು ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯನ್ನು ಪ್ರತಿದಿನವೂ ಮಾಡಲಾಗುತ್ತಿದೆ. ಇದರಲ್ಲಿ ಜನರಿಗೆ ಉಪಯೋಗವಾಗಿದ್ದಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಏಕೆಂದರೆ ಆಗಿನಿಂದ ಇಲ್ಲಿವರೆಗೆ ಸರಿಸುಮಾರು 7 ರೂ. ನಷ್ಟು ತೈಲ ದರ ಹೆಚ್ಚಳವಾಗಿದೆ. ಪ್ರತಿ 15 ದಿನಗಳಿಗೊಮ್ಮೆ ದರ ಪರಿಷ್ಕರಣೆಯಿಂದ ಜನರ ಕಡೆಯಿಂದಲೇ ಆಕ್ರೋಶದ ಮಾತು ಕೇಳ ಬೇಕಾಗುತ್ತದೆ ಎಂದು ದಿನ ನಿತ್ಯವೂ ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿಯೇ ಸದ್ದೇ ಇಲ್ಲದಂತೆ ಪೈಸೆಗಳ ಲೆಕ್ಕಾಚಾರದಲ್ಲಿ ದರ ಬದಲಾಗುತ್ತಿದ್ದು, ಜನರ ಅರಿವಿಗೆ ಬಾರದೆ 7 ರೂ. ನಷ್ಟು ಹೆಚ್ಚಾಗಿದೆ.

28 ಡಾಲರ್‌ಗೆ ಇಳಿದಿತ್ತು: 2016ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಕಡಿಮೆ, ಅಂದರೆ, ಪ್ರತಿ ಬ್ಯಾರೆಲ್‌ಗೆ 28 ಡಾಲರ್‌ಗೆ ಇಳಿದಿತ್ತು. ವಿಚಿತ್ರವೆಂದರೆ ಆಗಲೂ ದಿಲ್ಲಿಯಲ್ಲಿದ್ದ ಪೆಟ್ರೋಲ್‌ ದರ ಪ್ರತಿ ಲೀ.ಗೆ 59.35 ರೂ. ಅದೇ ರೀತಿ ಡೀಸೆಲ್‌ 45 ರೂ.ಗೆ ಇಳಿಕೆಯಾಗಿತ್ತು. ಡೀಸೆಲ್‌ ದರ ಆಗ 45 ರೂ. ಗೆ ಇಳಿದಿದ್ದು ಬಿಟ್ಟರೆ ಮತ್ತೆ ಅದು 50 ರೂ.ಗಳ ಒಳಗೆ ಬಂದಿದ್ದು ಇಲ್ಲವೇ ಇಲ್ಲ ಎಂದು ಹೇಳಬಹುದು.

Advertisement

ಕೇಂದ್ರದಿಂದಲೇ ಭಾರೀ ತೆರಿಗೆ: 2016ರ ಆರಂಭಕ್ಕೆ ಅನ್ವಯವಾಗುವಂತೆ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹಾಕಲಾಗುತ್ತಿದ್ದ ಕೇಂದ್ರ ತೆರಿಗೆ ತುಸು ಹೆಚ್ಚಾಗಿಯೇ ಇದೆ. 2012ರ ಆರಂಭದಲ್ಲಿ ಇದ್ದ ಅಬಕಾರಿ ತೆರಿಗೆ ಪೆಟ್ರೋಲ್‌ಗೆ 9.48 ರೂ. ಮತ್ತು ಡೀಸೆಲ್‌ಗೆ 3.56 ರೂ. ಇದ್ದರೆ, 2016ರ ಆರಂಭಕ್ಕೆ ಪೆಟ್ರೋಲ್‌ ಮೇಲೆ ಅಬಕಾರಿ ತೆರಿಗೆ 21.48 ರೂ. ಹಾಗೂ ಡೀಸೆಲ್‌ಗೆ 17.33 ರೂ. ಇದೆ. ಕೇಂದ್ರ ಸರಕಾರದ ಅಬಕಾರಿ ಸುಂಕವೇ ಇಷ್ಟಿದ್ದರೆ, ಇನ್ನು ರಾಜ್ಯಗಳ ವ್ಯಾಟ್‌ ಇನ್ನೂ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಸದ್ಯದ ಮಟ್ಟಿಗೆ ಸಮಾಧಾನದ ಸಂಗತಿ ಎಂದರೆ, ಜಿಎಸ್‌ಟಿ ಜಾರಿಯಾದ ಮೇಲೆ ಪ್ರವೇಶ ತೆರಿಗೆ ಹೋಗಿದೆ. ಇಲ್ಲಿ ಕೊಂಚ ಮಟ್ಟಿಗೆ ದರ ಕಡಿಮೆಯಾಗಿದೆ.

ದಿನವಹಿ ರೇಟು ಯಥಾಸ್ಥಿತಿ 
ಸದ್ಯ ಜಾರಿಯಲ್ಲಿರುವ ದಿನವಹಿ ತೈಲ ದರ ಪರಿಷ್ಕರಣೆ ವಿಧಾನವನ್ನು ಯಾವುದೇ ಕಾರಣಕ್ಕೂ ತೆಗೆದುಹಾಕುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮೂರು ವರ್ಷಗಳ ಹಿಂದಿನ ದರ ಮುಟ್ಟಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ತೈಲ ಕಂಪೆನಿಗಳು ದಿನವಹಿ ದರ ಪರಿಷ್ಕರಣೆ ಮಾಡುತ್ತಿವೆ. ಈ ವ್ಯವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಮೂಗು ತೂರಿಸಲು ಹೋಗುವುದಿಲ್ಲ. ಅದು ಹಾಗೆಯೇ ಇರುತ್ತದೆ. ಅಲ್ಲದೆ ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರೀ ಚಂಡ ಮಾರುತ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವೂ ಹೆಚ್ಚಾಗಿದೆ. ಹೀಗಾಗಿ ಸದ್ಯ ಬೆಲೆ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next