Advertisement

ಹಿಜಾಬ್‌ಧಾರಿಗಳಿಗೆ ಪ್ರತ್ಯೇಕ ಕೊಠಡಿ ಕೇಸರಿ ಶಾಲಿಗೂ ಪ್ರವೇಶ ಇಲ್ಲ

12:56 AM Feb 08, 2022 | Team Udayavani |

ಕುಂದಾಪುರ: ಸರಕಾರ ಸಮವಸ್ತ್ರ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದ್ದರೂ ಕುಂದಾಪುರದ ವಿವಿಧ ಕಾಲೇಜುಗಳಲ್ಲಿ ಹಿಜಾಬ್‌ ಗೊಂದಲ ಸೋಮ ವಾರವೂ ಮುಂದುವರಿದಿದೆ.

Advertisement

ಸರಕಾರಿ ಜೂನಿಯರ್‌ ಕಾಲೇಜಿಗೆ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶವಿರಲಿಲ್ಲ. ತೆಗೆದಿಟ್ಟು ಬನ್ನಿ ಎಂಬ ಪ್ರಾಂಶುಪಾಲರು, ಬೋಧಕವೃಂದದ ಮಾತಿಗೆ ಅವರು ಸ್ಪಂದಿಸಲಿಲ್ಲ. ಆದರೂ ವಿವಿಧ ರೀತಿಯಲ್ಲಿ ಸಮಸ್ಯೆ ಆಗುತ್ತದೆ ಎಂಬ ಕಾರಣ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಯಿತು.

ಮಾಧ್ಯಮವೂ ಹೊರಕ್ಕೆ
ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಹೊರತು ಇತರರಿಗೆ ಪ್ರವೇಶವಿಲ್ಲ ಎಂಬ ಆದೇಶದ ಪ್ರತಿಯನ್ನು ಗೇಟಿನ ಬಳಿ ಅಂಟಿಸಲಾಗಿತ್ತು. ಆದರೆ ಮಾಧ್ಯಮಗಳ ಸಾಲನ್ನು ಕಂಡು ದಂಗಾದ ಕಾಲೇಜು ಆಡಳಿತ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಪ್ರವೇಶ ಇಲ್ಲ ಎಂದು ಗೇಟಿಗೆ ಬೋರ್ಡು ತಗುಲಿ ಹಾಕಿತು. ಹಿಜಾಬ್‌ ತೆಗೆದು ತರಗತಿಗೆ ಬನ್ನಿ ಎಂದು ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಿದ್ದು ವಿಫ‌ಲವಾಯಿತು. ವಿದ್ಯಾರ್ಥಿನಿಯರು ಕೋರ್ಟ್‌ ತೀರ್ಮಾನ ಬಂದ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಖಾಸಗಿಯಲ್ಲಿ
ಕುಂದಾಪುರದ ಖಾಸಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಜೈ ಶ್ರೀರಾಮ್‌ ಘೋಷಣೆ ಕೂಗುತ್ತಾ ಕಾಲೇಜಿಗೆ ತೆರಳಿದರು. ಹಿಜಾಬ್‌ ಧರಿಸಿದರೆ ನಾವು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಆಗ್ರಹಿಸಿದರು. ಕಾಲೇಜಿನ ಗೇಟ್‌ ಬಳಿ ವಿದ್ಯಾರ್ಥಿಗಳನ್ನು ತಡೆದ ಪ್ರಾಂಶುಪಾಲರು, ಬೇರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಅಡ್ಡಿಯುಂಟು ಮಾಡದಂತೆ ಸೂಚನೆ ನೀಡಿದರು. ಕೇಸರಿ ಶಾಲುಗಳನ್ನು ತೆಗೆದಿರಿಸಿ ಬಳಿಕ ತರಗತಿ ಪ್ರವೇಶಕ್ಕೆ ಅನುಮತಿ ನೀಡಿದರು. ಗಂಗೊಳ್ಳಿಯಲ್ಲೂ ಇದೇ ಮಾದರಿಯಲ್ಲಿ ನಡೆದಿದೆ.

ಇದನ್ನೂ ಓದಿ:ದೌರ್ಜನ್ಯಕ್ಕೊಳಗಾದ ಯುವತಿಗೆ ಮೋಸ ಮಾಡಿದ ಆರೋಪಿ ಪೊಲೀಸ್ ಬಲೆಗೆ

Advertisement

ಪದವಿ ಕಾಲೇಜಿನಲ್ಲಿ
ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ವಿವಾದದ ಕಿಡಿ ಕಾಣಿಸಿತು. ಮೂವರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದರು. ಗೇಟಿನ ಬಳಿ ಅವರನ್ನು ತಡೆದು ಸರಕಾರದ ಆದೇಶದ ಬಗ್ಗೆ ಪ್ರಭಾರ ಪ್ರಾಂಶುಪಾಲರು ತಿಳಿಸಿದರು. ಹಿಜಾಬ್‌ ಧರಿಸಿದ ಮೂವರು ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದೆ ಮನೆಗೆ ತೆರಳಿದ್ದು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಶಾಲು ತೆಗೆದಿಟ್ಟು ತರಗತಿಗೆ ತೆರಳಿದರು.

ಹೈಕೋರ್ಟಿಗೆ
ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶ ನೀಡದ ಕ್ರಮದ ವಿರುದ್ಧ ಸೋಮವಾರ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next