Advertisement

ಹಿಜಾಬ್‌ ವಿವಾದ : ಶಾಂತವಾಗಿ ತೀರ್ಪು ಸ್ವೀಕರಿಸಿದ ಉಡುಪಿ ಜನತೆ

03:23 PM Mar 16, 2022 | Team Udayavani |

ಉಡುಪಿ : ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ, ವಿಜಯೋತ್ಸವಗಳು ನಡೆದಿಲ್ಲ. ನ್ಯಾಯಾಲಯದ ತೀರ್ಪನ್ನು ವಿದ್ಯಾರ್ಥಿಗಳು ಸಹಿತವಾಗಿ ಬಹುತೇಕರು ಶಾಂತವಾಗಿ ಸ್ವೀಕರಿಸಿ, ಸ್ವಾಗತಿಸಿದ್ದಾರೆ. ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರದಿಂದ ಎಂದಿನಂತೆ ಶೈಕ್ಷಣಿಕ ತರಗತಿಗಳು ಹಾಗೂ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ, ಪೋಷಕರು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಣ ಸಂಸ್ಥೆಗಳು, ಶೈಕ್ಷಣಿಕ ಸಂಘಟನೆಗಳು ನ್ಯಾಯಾಲಯದ ತೀರ್ಪನ್ನು ಗೌರವಿಸಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರ ವಹಿಸುವುದು ಅತಿ ಮುಖ್ಯವಾಗಿದೆ ಎಂಬುದು ಜನಾಭಿಪ್ರಾಯವಾಗಿದೆ.

ಮಂಗಳವಾರ ಎಲ್ಲ ಶಾಲಾ ಕಾಲೇಜು ಗಳಿಗೂ ರಜೆ ನೀಡಿದ್ದರೂ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕಾಲೇಜು ಗಳ ಆಡಳಿತಾತ್ಮಕ ಕಾರ್ಯಗಳಲ್ಲಿ ಭಾಗ ವಹಿಸಿದ್ದಾರೆ. ಎಲ್ಲೆಡೆಯಲ್ಲೂ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹಿಜಾಬ್‌ ವಿವಾದ ಆರಂಭವಾದ ಸರಕಾರಿ ಬಾಲಕಿಯರ ಪಿಯು ಕಾಲೇಜು, ಎಂಜಿಎಂ ಕಾಲೇಜು ಸಹಿತವಾಗಿ ಎಲ್ಲ ಪ್ರೌಢಶಾಲೆ, ಕಾಲೇಜುಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

144 ಸೆಕ್ಷನ್‌ ಜಾರಿ
ಜಿಲ್ಲೆಯ ಶಾಲಾ ಕಾಲೇಜುಗಳ ಆವರಣದಲ್ಲಿ ಯಾವುದೇ ವಿಜಯೋತ್ಸವ, ಗುಂಪು ಘರ್ಷಣೆ ನಡೆಯದಂತೆ ಮಾ. 21ರ ಸಂಜೆ 6ರ ವರೆಗೆ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಿ, ಪಾಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಸ್ವಾಗತ  X ವಿರೋಧ
ಕೆಲವು ಮುಸ್ಲಿಂ ಸಂಘಟನೆಗಳು ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿವೆ. ಹಿಂದೂ ಪರ ಸಂಘಟನೆಗಳು ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next