Advertisement

ಹುಬ್ಬಳ್ಳಿಯಲ್ಲೂ ಕಿಡಿಹೊತ್ತಿಸಿದ ಹಿಜಾಬ್‌; ನಿಷೇಧಾಜ್ಞೆ ಜಾರಿ

05:20 PM Feb 17, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಜೆ.ಸಿ.ನಗರದಲ್ಲಿನ ಎಸ್‌ಜೆಎಂವಿ ಮಹಿಳಾ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದರಿಂದ ಗೊಂದಲದ ಸ್ಥಿತಿ ನಿರ್ಮಾಣಗೊಂಡು, ಕಾಲೇಜು ಸುತ್ತಲೂ 100 ಮೀಟರ್‌ ವ್ಯಾಪ್ತಿಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಾಲೇಜಿಗೆ ರಜೆ ಘೋಷಿಸಲಾಯಿತು.

Advertisement

ಕಳೆದೊಂದು ವಾರದಿಂದ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಇಂದು ಮರು ಆರಂಭಕ್ಕೆ ಸೂಚನೆ ನೀಡಲಾಗಿತ್ತು. ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ 12ಕ್ಕೂ ಅಧಿಕ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಬಂದಿದ್ದರೆನ್ನಲಾಗಿದೆ. ಅವರನ್ನು ಒಳಗಡೆ ಕರೆಯಿಸಿ ಹಿಜಾಬ್‌ ತೆಗೆದು ತರಗತಿಯಲ್ಲಿ ಕುಳಿತುಕೊಳ್ಳಬೇಕು ಎನ್ನುವ ಸೂಚನೆಯನ್ನು ಮಹಾವಿದ್ಯಾಲಯದಿಂದ ನೀಡಲಾಗಿದೆ.

ಇದಕ್ಕೊಪ್ಪದ ವಿದ್ಯಾರ್ಥಿನಿಯರು ನಾವು ಹಿಜಾಬ್‌ ಹಾಕಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುತ್ತೇವೆಂದು ಹೇಳಿದಾಗ ವಿದ್ಯಾಲಯದಲ್ಲಿ ಅದಕ್ಕೆ ತಡೆ ನೀಡಲಾಗಿದ್ದು, ಆದರಲ್ಲಿ ಓರ್ವ ವಿದ್ಯಾರ್ಥಿನಿ ಹೊರಗಡೆ ತೆರಳಿ ಪಾಲಕರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಇದರಿಂದ ಕಾಲೇಜು ಮುಂಭಾಗದಲ್ಲಿ ನೂರಾರು ಜನರು ಸೇರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಯಿಸಿ ಪರಿಸ್ಥಿತಿ ನಿಭಾಯಿಸಿದರು.

ನಿಷೇಧಾಜ್ಞೆ ಜಾರಿ: ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗುತ್ತಿರುವುದನ್ನರಿತ ಪೊಲೀಸರು ಕಾಲೇಜು ವ್ಯಾಪ್ತಿಯ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಸ್ಥಳದಲ್ಲಿದ್ದ ಜನರನ್ನು ಚದುರಿಸಿದರು. ಮಹಾವಿದ್ಯಾಲಯದ ಮುಂಭಾಗ ದಲ್ಲಿದ್ದ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿಕೊಟ್ಟರು. ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಹು.ಧಾ. ಶಾಲಾ-ಕಾಲೇಜು ಸುತ್ತ 28ರವರೆಗೆ ನಿಷೇಧಾಜ್ಞೆ ಜಾರಿ

Advertisement

ಹುಬ್ಬಳ್ಳಿ: ಹು-ಧಾ ಅವಳಿ ನಗರದ ಶಾಲೆಗಳು, ಪಿಯು ಕಾಲೇಜ್‌, ಪದವಿ ಕಾಲೇಜ್‌ ಸೇರಿದಂತೆ ಶಿಕ್ಷಣ ಸಂಸ್ಥೆಗಳ 200 ಮೀಟರ್‌ ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಫೆ.28ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ-ಕಾಲೇಜ್‌ ಸುತ್ತಲಿನ ಪ್ರದೇಶಗಳಲ್ಲಿ ಗುಂಪು ಸೇರುವುದು, ಪ್ರತಿಭಟಿಸುವುದು ಸೇರಿದಂತೆ ಆತಂಕ ಸೃಷ್ಟಿಸುವಂತಹ ಘಟನಾವಳಿಗಳಿಗೆ ನಿಷೇಧ ಹೇರಿ 144ನೇ ಕಲಂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ
ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಲಾಭೂ ರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯ ಆದೇಶದಂತೆ ಹಿಜಾಬ್‌ ತೆಗೆಯಿರಿ ಎಂದು ಹೇಳಿದೆವು. ಹಿಜಾಬ್‌ ತೆಗೆಯಲು ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಿದ್ದರೂ ಒಪ್ಪದ ಕೆಲ ವಿದ್ಯಾರ್ಥಿನಿಯರು ಪಾಲಕರನ್ನು ಕರೆಸಿ ವಿನಾಕಾರಣ ಗೊಂದಲ ಮೂಡಿಸಿದ್ದಾರೆ. ಇದರಿಂದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮಹಾವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ ಮುಂದಿನ ಸೂಚನೆವರೆಗೆ ಕಾಲೇಜಿಗೆ ರಜೆ ನೀಡಲಾಗಿದೆ.
ಡಾ|ಲಿಂಗರಾಜ ಅಂಗಡಿ,
ಪ್ರಾಚಾರ್ಯ

ನ್ಯಾಯಾಲಯದ ಆದೇಶ ಸರಕಾರಿ ಕಾಲೇಜುಗಳಿಗೆ ಅನ್ವಯವಾಗಲಿದ್ದು, ಖಾಸಗಿ ಕಾಲೇಜುಗಳಿಲ್ಲ. ಪರಿಸ್ಥಿತಿ ಕೈ ಮೀರುವ ಹಂತದಲ್ಲಿದ್ದು, ಅದನ್ನರಿತು ಪರಿಸ್ಥಿತಿ ನಿಭಾಯಿಸಿದ್ದೇವೆ. ನಗರದಲ್ಲಿ ಶಾಂತಿ ಕಾಪಾಡುವುದು ನಮ್ಮ ಉದ್ದೇಶ. ಇಲ್ಲಿಂದ ಎಲ್ಲರನ್ನು ಕಳುಹಿಸಲಾಗಿದೆ. ಕಾಲೇಜು ಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಮಹ್ಮದ ಯೂಸೂಫ್‌ ಸವಣೂರ,
ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next