ಶಿವಮೊಗ್ಗ: ಬಿಜೆಪಿ ಜೆಡಿಎಸ್ ಒಂದಾಗಿರೋದಕ್ಕೆ ಗಾಬರಿಯಾಗಿದೆ, ಭಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಲೋಕಸಭೆಯಲ್ಲಿ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಒಂದೇ ಒಂದು ಸ್ಥಾನ ಬರಲ್ಲ. ಹೀಗಾಗಿ ಹಿಜಾಬ್ ನಿಷೇಧಕ್ಕೆ ಕೈ ಹಾಕಿದ್ದಾರೆ. ರಾಜ್ಯದಲ್ಲಿ ಗಲಾಟೆ, ದೊಂಬಿ, ಕೊಲೆಗಳಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಮ್ಮದ್ ಬಿನ್ ತುಘಲಕ್ ನನ್ನು ಹುಚ್ಚು ದೊರೆ ಎನ್ನುತ್ತಿದ್ದರು. ಸಿದ್ದರಾಮಯ್ಯ ಹುಚ್ಚು ದೊರೆ ಆಗಿದ್ದಾರೆ. ಕೋರ್ಟ್ ನಲ್ಲಿ ಹಿಜಾಬ್ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಮುಸ್ಲಿಮರನ್ನು ತೃಪ್ತಿಪಡಿಸಲು ಇವರಿಗೆ ಕಾನೂನು, ಹೈಕೋರ್ಟ್, ಸಚಿವ ಸಂಪುಟ ಸದಸ್ಯರು ಲೆಕ್ಕಕ್ಕಿಲ್ಲ ಎಂದರು.
ಸರಕಾರಿ ಆದೇಶ ಆಗಿಲ್ಲ. ಬಾಯಲ್ಲಿ ಹೇಳಿ ಬಿಟ್ಟಿದ್ದಾರಂತೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಯಾವುದೂ ಬೇಡವೇ? ರಾಜ್ಯದಲ್ಲಿ ಹಿಂದೂ ಮುಸ್ಲಿಂ ಹೊಡೆದಾಟವಾಗಲಿ ಎಂಬುದು ಅವರ ಆಸೆ. ಉಡುಪಿಯಲ್ಲಿ ಹಬ್ಬಿದ ಈ ಕಿಚ್ಚು ಇಡಿ ರಾಜ್ಯಕ್ಕೆ ಹಬ್ಬಿತ್ತು. ನಂತರ ಇದು ನ್ಯಾಯಾಲಯದ ಮೆಟ್ಟಿಲೇರಿತ್ತು ನ್ಯಾಯಾಲಯ ಸಹ ರಾಜ್ಯ ಸರಕಾರ ತೀರ್ಪು ಸರಿ ಇದೆ ಎಂದು ತಿಳಿಸಿತ್ತು. ಸಿದ್ದರಾಮಯ್ಯ ಅವರಿಗೆ ಕೋರ್ಟ್ ಬಗ್ಗೆ ಗೌರವ ಇದೆಯಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:Desi Swara: ಹೊಸ ದೇಶದ ಮನೆಯ ಬೇಟೆ : ಬದುಕಿನ ನೆಲೆಗಾಗಿ ಅಲೆದಾಟ
ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಸ್ಪೀಕರ್ ಗೆ ಎಲ್ಲರೂ ತಲೆಬಾಗಬೇಕು ಎಂದು ಹೇಳುತ್ತಾರೆ. ರಾಜ್ಯದಲ್ಲಿ ಹಿಂದೂ ಮುಸ್ಲಿಮರು ಗೊಂದಲಕ್ಕೆ ಬೀಳಬೇಕು. ಮುಸ್ಲಿಂ ಓಟು ಕಾಂಗ್ರೆಸ್ ಗೆ ಬೀಳಬೇಕು ಎಂಬ ಒಂದೇ ಉದ್ದೇಶ ಅವರದ್ದು. ಬರಗಾಲ ಬಂದಿರುವ ಈ ಸಮಯದಲ್ಲಿ ಒಬ್ಬರಿಗೂ ಬೆಳೆ ಪರಿಹಾರ ಬಂದಿಲ್ಲ. ಆದರೆ 10 ಸಾವಿರ ಕೋಟಿ ಮುಸ್ಲಿಂರಿಗೆ ಕೊಡುತ್ತೇವೆ ಎನ್ನುತ್ತಾರೆ. ಮಹಮ್ಮದ್ ಬಿನ್ ತೊಘಲಕ್ ಸರಕಾರವನ್ನು ರಾಜ್ಯದ ಜನ ತೆಗೆದು ಹಾಕಲಿದ್ದಾರೆ. ಪಿಎಫ್ ಐ ಆಸೆ ಈಡೇರಿಸಲು ಕುತಂತ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರವಿದೆ. ಹಿಜಾಬ್ ಹಾಕಿಕೊಂಡು ಬಂದರೆ ಒಂದು ರೂಮಲ್ಲಿ ಹೋಗಿ ಬಿಚ್ಚಿಡುತ್ತಿದ್ದರು. ಈ ಶಿಸ್ತಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಏಕೆ ಅಡ್ಡ ಬರುತ್ತಿದ್ದಾರೆ? ಕಾನೂನು ಸಚಿವರು ಈಗಲಾದರೂ ನಾನು ಇದ್ದೀನೆಂದು ತೋರಿಸಬೇಕು. ಕಾನೂನು ಸಚಿವ ಕಾನೂನು ಓದಿದ್ದರೆ ಇದನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು. ಈ ಆದೇಶ ಜಾರಿಗೆ ತರಲು ಅವಕಾಶ ಕೊಡಬಾರದು. ಇದು ಒಂದು ವೇಳೆ ಜಾರಿಯಾದರೆ ಕಾನೂನು ಸಚಿವರಾಗಿ ಮುಂದುವರಿಯಬಾರದು. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪಕ್ಷದ ವತಿಯಿಂದ ನಾವು ಕಾನೂನು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕಾನೂನು ಹೋರಾಟ ಬಿಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.