Advertisement

ಜೈ ರಾಮ್ ಘೋಷಣೆಗೆ ಅಲ್ಲಾ ಹೂ ಅಕ್ಬರ್ ಕೂಗಿ ಪ್ರತಿರೋಧ ಒಡ್ಡಿದ ವಿದ್ಯಾರ್ಥಿನಿ:ವಿಡಿಯೋ ವೈರಲ್

07:24 PM Feb 08, 2022 | Team Udayavani |

ಮಂಡ್ಯ: ನಗರದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಮಂಗಳವಾರ ನಗರದ ಪಿಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ನಡೆಯಿತು.

Advertisement

ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳ ನಡುವೆ ವಾಕ್ಸಮರ ನಡೆಯಿತು. ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಕೇಸರಿ ಶಾಲು ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.

ಆಗ ಅದೇ ಸಂದರ್ಭದಲ್ಲಿ ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿ ಕಾಲೇಜಿಗೆ ಆಗಮಿಸಿದಾಗ ಕೇಸರಿ ಶಾಲು ಹಾಕಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿ ವಿರುದ್ಧ ಘೋಷಣೆ ಕೂಗಿದರು. ಜೈಶ್ರೀರಾಮ್ ಎಂದು ಕೂಗ ತೊಡಗಿದರು.

ಇದಕ್ಕೆ ಪ್ರತಿರೋಧ ಒಡ್ಡಿದ ವಿದ್ಯಾರ್ಥಿನಿ ಅಲ್ಲಾ ಹೂ ಅಕ್ಬರ್ ಎಂದು ಕೂಗಿದಳು. ಇದರಿಂದ ಇಬ್ಬರ ನಡುವಿನ ಕೂಗಾಟ ಜೋರಾಯಿತು. ತಕ್ಷಣ ಎಚ್ಚೆತ್ತ ಕಾಲೇಜಿನ ಉಪನ್ಯಾಸಕರು ಹಾಗೂ ಅಧ್ಯಾಪಕರು ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯನ್ನು ತರಗತಿಯ ಕೊಠಡಿಗೆ ಕಳುಹಿಸಲಾಯಿತು. ಈ ನಡುವೆ ಉಪನ್ಯಾಸಕರು ಹಾಗೂ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕಾಲೇಜು ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಕಾಲೇಜು ಆಡಳಿತ ಮಂಡಳಿ ಕೇಸರಿ ಶಾಲು ಹಾಕಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿತು. ಕೇಸರಿ ಶಾಲು ತೆಗೆದು ತರಗತಿಗೆ ಆಗಮಿಸುವಂತೆ ಸೂಚಿಸಲಾಯಿತು. ಆದರೆ ವಿದ್ಯಾರ್ಥಿಗಳು ಹಿಜಾಬ್ ತೆಗೆಸಿದರೆ ನಾವು ಕೇಸರಿ ಶಾಲು ತೆಗೆಯುತ್ತೇವೆ ಎಂದು ಪಟ್ಟು ಹಿಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ:

ನಂತರ ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನಿಂದ ನೇರವಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಧರಣಿ ನಡೆಸಿದರು. ಇದಕ್ಕೆ ವಿವಿಧ ಹಿಂದೂಪರ ಸಂಘಟನೆಗಳು ಬೆಂಬಲ ನೀಡಿದವು.

ಕೇಸರಿ ಶಾಲು ಹೊದ್ದಿದ್ದ ಬಾಲಕ:

ಬಾಲಕನೊಬ್ಬ ಕೇಸರಿ ಶಾಲನ್ನು ಹೊದ್ದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ಯಾವುದೇ ಕಾರಣಕ್ಕೂ ಕೇಸರಿ ಶಾಲು ತೆಗೆಯುವುದಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಬರಬೇಕು. ಆಗ ನಾವೂ ಕೂಡ ಕೇಸರಿ ಶಾಲು ತೆಗೆದು ಬರುತ್ತೇವೆ. ರಾಜ್ಯ ಸರ್ಕಾರ ವಸ್ತ್ರ ಸಂಹಿತೆ ಹಿನ್ನೆಲೆಯಲ್ಲಿ ಯೂನಿಫಾರಂ ಕಡ್ಡಾಯಗೊಳಿಸಿದೆ. ಆದರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೇರೆ ಕಾನೂನು ಇದೆಯಾ?. ಕೂಡಲೇ ಎಲ್ಲರೂ ಯೂನಿಫಾರ್ಮ್ ಧರಿಸಬೇಕು ಎಂದು ಆಗ್ರಹಿಸಿದರು.

ಪಿಇಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳು ಒಂದೇ. ಹಿಂದಿನಿಂದ ಯಾವ ಸಂಪ್ರದಾಯ ನಡೆದುಕೊಂಡು ಬಂದಿದೆಯೋ ಅದನ್ನೇ ಪಾಲಿಸುತ್ತಿದ್ದೇವೆ. ಇಲ್ಲಿ ಜಾತಿ, ಧರ್ಮ ಸಂಘರ್ಷಕ್ಕೆ ಅವಕಾಶವಿಲ್ಲ. ಕಾಲೇಜಿಗೆ ಬಂದ ತಕ್ಷಣ ಎಲ್ಲ ವಿದ್ಯಾರ್ಥಿಗಳು ಸರಸ್ವತಿ ಪುತ್ರರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳಿಗೆ ಅವಕಾಶ ನೀಡದಂತೆ ಕಾಲೇಜು ಆಡಳಿತ ಮಂಡಳಿಯೊAದಿಗೆ ಚರ್ಚಿಸಿದ್ದೇನೆ ಎಂದು ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next