Advertisement

ಸಂಸತ್‌ನಲ್ಲೂ ಸದ್ದು ಮಾಡಿದ ಹಿಜಾಬ್‌ ವಿವಾದ

10:25 PM Feb 08, 2022 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದ ಈಗ ಸಂಸತ್‌ನಲ್ಲೂ ಸದ್ದು ಮಾಡಿದೆ. “ಹಿಜಾಬ್‌ ಧರಿಸುವುದು ಅಪರಾಧವಲ್ಲ’ ಎಂದು ಮಂಗಳವಾರ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಂಸದರು ಪ್ರತಿಪಾದಿಸಿದ್ದು, “ಕೇಂದ್ರ ಸರ್ಕಾರ ಕೂಡಲೇ ಈ ವಿಚಾರದಲ್ಲಿ ತನ್ನ ನಿಲುವು ಪ್ರಕಟಿಸಬೇಕು’ ಎಂದು ಕೋರಿದ್ದಾರೆ. ಅಲ್ಲದೇ, ಕಾಂಗ್ರೆಸ್‌, ಡಿಎಂಕೆ, ಸಿಪಿಎಂ, ಸಿಪಿಐ, ಎಂಡಿಎಂಕೆ, ಮುಸ್ಲಿಂ ಲೀಗ್‌ ಸೇರಿದಂತೆ 8 ಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದಾರೆ.

Advertisement

ಆರಂಭದಲ್ಲಿ  ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಹಿಜಾಬ್‌ ಧರಿಸಿದ್ದಕ್ಕಾಗಿ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಹಿಂದೂಗಳು ಹಣೆಗೆ ತಿಲಕವಿಡುತ್ತಾರೆ. ಅದೇ ರೀತಿ ಮುಸ್ಲಿಮರು ಹಿಜಾಬ್‌ ಧರಿಸುತ್ತಾರೆ. ಅದನ್ನು ಧರಿಸುವುದು ಅಪರಾಧವಲ್ಲ. ಸುಖಾಸುಮ್ಮನೆ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ರಾಜ್ಯ ಬಿಜೆಪಿ ಸಂಸದ ಶಿವಕುಮಾರ್‌ ಉದಾಸಿ, “ಕಾನೂನು ಸುವ್ಯವಸ್ಥೆಯೇ ಮುಖ್ಯ ಎಂದು ಹಲವು ಕೋರ್ಟ್‌ಗಳು ಆದೇಶ ನೀಡಿದ್ದರೂ, ಕಾಂಗ್ರೆಸ್‌ ನಾಯಕರು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅಲ್ಲದೇ, ಈ ವಿಚಾರ ಕೋರ್ಟ್‌ನಲ್ಲಿರುವ ಕಾರಣ ಈ ಬಗ್ಗೆ ಇಲ್ಲಿ ಧ್ವನಿಯೆತ್ತುವಂತಿಲ್ಲ’ ಎಂದರು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಬಜೆಟ್‌  ಕುರಿತ ಚರ್ಚೆ ಮುಂದುವರಿಸುವಂತೆ ಸೂಚಿಸದರು. ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು.

ಇದನ್ನೂ ಓದಿ:ಹಿಜಾಬ್‌ ಪ್ರಕರಣದ ಹಿಂದಿನ ಶಕ್ತಿಗಳ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

ಮಧ್ಯಪ್ರದೇಶದಲ್ಲೂ ಹಿಜಾಬ್‌ ಬ್ಯಾನ್‌?:
ಕರ್ನಾಟಕದಲ್ಲಿ ಆರಂಭವಾದ ಹಿಜಾಬ್‌ ಗಲಾಟೆ ನೆರೆ ರಾಜ್ಯಗಳಿಗೂ ಹಬ್ಬಲಾರಂಭಿಸಿದ್ದು, ಇದೀಗ ಮಧ್ಯಪ್ರದೇಶದ ಶಾಲೆಗಳಲ್ಲೂ ಹಿಜಾಬ್‌ ನಿಷೇಧಿಸುವ ಚಿಂತನೆ ಆರಂಭವಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾರ್‌ ಮಂಗಳವಾರ ಮಾತನಾಡಿದ್ದು, “ಶಾಲೆಗಳಲ್ಲಿ ಡ್ರೆಸ್‌ ಕೋಡ್‌ ಮಾಡಲಾಗುವುದು. ಹಿಜಾಬ್‌ ಸಮವಸ್ತ್ರದ ಭಾಗವಲ್ಲದ್ದರಿಂದ ಅದನ್ನು ನಿಷೇಧಿಸಲಾಗುವುದು’ ಎಂದಿದ್ದಾರೆ. “ಶಾಲೆಗಳಲ್ಲಿ ವಸ್ತ್ರಸಂಹಿತೆ ತರುವ ಬಗ್ಗೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅದು ಆರಂಭವಾಗಲಿದೆ. ಸಮವಸ್ತ್ರದ ಭಾಗವಲ್ಲದ ಹಿಜಾಬ್‌ಗ ನಿಷೇಧವಿರಲಿದೆ’ ಎಂದು ಸಚಿವರು ಹೇಳಿದ್ದಾರೆ.

Advertisement

ಸಮವಸ್ತ್ರ ಧರಿಸುವ ಕುರಿತು ಆಯಾ ಶಾಲೆ-ಕಾಲೇಜುಗಳು ಮಾರ್ಗಸೂಚಿ ಹೊರಡಿಸಿರುತ್ತವೆ. ಅವುಗಳನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಗೊಂದಲವೇನಿದೆ? ವಸ್ತ್ರಸಂಹಿತೆ ಪಾಲಿಸುತ್ತೇವೆ ಎಂದು ವಿದ್ಯಾರ್ಥಿಗಳು ಮತ್ತು ಹೆತ್ತವರು ಲಿಖೀತ ದಾಖಲೆಗೂ ಸಹಿ ಹಾಕಿದ್ದಾರೆ.
– ಪ್ರಹ್ಲಾದ್‌ ಜೋಷಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next