Advertisement

ಹೆದ್ದಾರಿ ಕಾಮಗಾರಿ ಶೀಘ್ರ ಮುಗಿಸಿ

03:47 PM Nov 29, 2019 | Suhan S |

ಮುಳಬಾಗಿಲು: ನಗರದ ಶಾಮೀರ್‌ ಮೊಹಲ್ಲಾದಿಂದ ಬಜಾರು ರಸ್ತೆ ಮೂಲಕ ಚೊಕ್ಕದೊಡ್ಡಿ ಗೇಟ್‌ವರೆಗೂ ಅಭಿವೃದ್ಧಿ ಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿಂದೆ ಇದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಅರ್ಧಕ್ಕೆ ಕೈಬಿಟ್ಟರಿಂದ ಒಂದೂವರೆ ವರ್ಷದಿಂದ ಹೆದ್ದಾರಿ ಕಾಮಗಾರಿ ಕುಟುಂತ ಸಾಗಿದೆ.

Advertisement

ಶ್ರೀನಿವಾಸಪುರದಿಂದ ಮುಳಬಾಗಿಲಿನ ಆಂಧ್ರದ ಗಡಿವರೆಗೂ ಹಾದು ಹೋಗಿರುವ 40 ಕಿ.ಮೀ. ಜಿಲ್ಲಾರಸ್ತೆಯನ್ನು ಸರ್ಕಾರ 2006ರಲ್ಲಿ ರಾಜ್ಯ ಹೆದ್ದಾರಿ 58 ಆಗಿ ಮೇಲ್ದರ್ಜೆಗೇರಿಸಿತ್ತು. ಆಗ ಲೋಕೋಪಯೋಗಿ ಅಧಿಕಾರಿಗಳು ಪಟ್ಟಣ, ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 22.50 ಮೀಟರ್‌ ಹಾಗೂ ಇತರೆ ಸ್ಥಳಗಳಲ್ಲಿ 40 ಮೀ. ರಸ್ತೆ ಅಗಲೀಕರಣಗೊಳಿಸಲು ಮುಂದಾಗಿದ್ದರು. ಅಂದಿನ ಶಾಸಕ ಆಲಂಗೂರ್‌ ಶ್ರೀನಿವಾಸ್‌ ಸಾರ್ವಜನಿಕರ ಹಿತದೃಷ್ಟಿಯಿಂದಹೆದ್ದಾರಿಯ ಅಕ್ಕಪಕ್ಕದ ಹಳ್ಳಿಗಳು ಮತ್ತು ನಗರದ ಬಜಾರು ರಸ್ತೆಯನ್ನು 50 ಅಡಿ ಮಾತ್ರವೇ ಅಗಲೀಕರಣ ಮಾಡಿಸಿದ್ದರು. ನಂತರ 2009-10ರಲ್ಲಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 234 ಆಗಿ ಮೇಲ್ದರ್ಜೆಗೇರಿಸಿದ್ದರು.

ಕಾಮಗಾರಿ ಅಪೂರ್ಣ: ಈ ಹೆದ್ದಾರಿಯನ್ನು 2015ರಿಂದ ಮೂಡಿಗೆರೆಯಿಂದ ಮುಳಬಾಗಿಲುವರೆಗೂ ದ್ವಿಪಥದಲ್ಲಿ ಅಭಿವೃದ್ಧಿ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಅಶೋಕ್‌ ಬಿಲ್ಡ್‌ಕಾನ್‌ ಕಂಪನಿಯು ಚಿಕ್ಕಬಳ್ಳಾಪುರದಿಂದ ಮುಳಬಾಗಿಲು ತಾಲೂಕು ಚೊಕ್ಕದೊಡ್ಡಿ ಗೇಟ್‌ವರೆಗಿನ 82.821 ಕಿ.ಮೀ. ಹೆದ್ದಾರಿಯನ್ನು 219 ಕೋಟಿ ರೂ.ನಲ್ಲಿ ಅಭಿವೃದ್ಧಿ ಪಡಿಸಲು ಜೆಎಸ್‌ಆರ್‌ ಕಂಪನಿಗೆ ಉಪಗುತ್ತಿಗೆ ನೀಡಿದೆ. ಅದರಂತೆ 7 ಮೀ. ಡಾಂಬರೀಕರಣ, ಎರಡೂ ಕಡೆಗಳಲ್ಲಿ 5 ಮೀ. ಮಣ್ಣಿನ ರಸ್ತೆ, ಇಕ್ಕೆಲಗಳಲ್ಲಿ ಚರಂಡಿ ಸೇರಿ  16 ಮೀ. ಅಗಲೀಕರಣ ಮಾಡಲಾಗುತ್ತಿದೆ. 2018ರ ಒಳಗಾಗಿ ಅಭಿವೃದ್ಧಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ನಗರದ ಶಾಮೀರ್‌ವೊಹ ಲ್ಲಾದಿಂದ ಚೊಕ್ಕದೊಡ್ಡಿ ಗೇಟ್‌ವರೆಗೂ ಭೂಸ್ವಾಧೀನ ಸರಿಯಾಗಿ ಆಗದೇ ಅಪೂರ್ಣಗೊಂಡಿದೆ.

ಗುಂಡಿ ಬಿದ್ದು ತೊಂದರೆ: ನಗರದ ಬಜಾರ್‌ ರಸ್ತೆ ಮೂಲಕಸೊನ್ನವಾಡಿ, ಗುಮ್ಲಾಪುರ, ಚೊಕ್ಕದೊಡ್ಡಿ ಗೇಟ್‌ವರೆಗೂ ಗುತ್ತಿಗೆದಾರರು ಅಲ್ಲಲ್ಲಿ ಕಾಮಗಾರಿ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಈ ಅಪೂರ್ಣಗೊಂಡಿರುವ ಕಡೆಯಲ್ಲಿ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆ ಕಿತ್ತುಹಾಕಿ ತೊಂದರೆ: ಸೊನ್ನವಾಡಿ, ಕವತನಹಳ್ಳಿ,ಗುಮ್ಲಾಪುರ ಗ್ರಾಮಗಳ ಬಳಿ, ಈ ಹಿಂದೆ ಇದ್ದ ಅಧಿಕಾರಿಗಳು ಭೂ ಸ್ವಾಧೀನಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಿನ ಅಧಿಕಾರಿಗಳು ಭೂಸ್ವಾಧೀನದಲ್ಲಿ ಉಂಟಾಗಿದ್ದ ಗೊಂದಲಗಳನ್ನು ಸರಿಪಡಿಸಲು 2 ತಿಂಗಳ ಹಿಂದೆ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಮೂಲಕ ರೈತರಿಗೆ ತಿಳಿವಳಿಕೆ ನೋಟಿಸ್‌ ನೀಡಿದ್ದರೂ ಹೆದ್ದಾರಿ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾರ್ಯಕೈಗೊಳ್ಳದೇ, ಇರುವುದರಿಂದ ಗುತ್ತಿಗೆದಾರರು ಹಿಂದೆ ಇದ್ದ ಉತ್ತಮರಸ್ತೆಯನ್ನು ಕಳೆದ ವರ್ಷವೇ ಕಿತ್ತು ಹಾಕಿ ವಾಹನಗಳ ಸಂಚಾರಕ್ಕೆ ಇನ್ನಿಲ್ಲದ ತೊಂದರೆಯನ್ನುಂಟು ಮಾಡಿದ್ದಾರೆ. ಮಳೆ ಬಂದರೆ ಗುತ್ತಿಗೆದಾರರು ಸೃಷ್ಟಿ ಮಾಡಿರುವ ಹಳ್ಳಗಳಿಂದ ವಾಹನಗಳ ಓಡಾಟಕ್ಕೆ ಹರಸಾಹಸ ಪಡಬೇಕಾಗುತ್ತದೆ.

Advertisement

 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next