ಕುಂದಾಪುರದ ಮಟ್ಟಿಗೆ ಅದೇನು ವರವೋ, ಶಾಪವೋ ಗೊತ್ತಿಲ್ಲ. ಫ್ಲೈಓವರ್ ಎಂಬ ಕಾಮಗಾರಿ ಹತ್ತು ವರ್ಷ ದಿನದೂಡುತ್ತಾ ಕುಂಟುತ್ತಾ ಸಾಗುತ್ತಾ ಕೊನೆಗೂ ಒಂದು ಹಂತಕ್ಕೆ ಬಂತು. ಕಾಮಗಾರಿ ವಿಳಂಬವಾಗಲು ಹತ್ತಾರು ಕಾರಣಗಳನ್ನು ನೀಡಲಾಯಿತು. ಅಂತೂ ಇಂತೂ ಆಗಾಗ ನಡೆಯುತ್ತಿದ್ದ ಲಾಕ್‌ಡೌನ್ ಅನ್ನು ತಪ್ಪಿಸಿ ಈ ಬಾರಿಯ ಲಾಕ್‌ಡೌನ್‌ಗೆ ಮುನ್ನ ಯಾವ ರಾಜಕಾರಣಿಯ ಮರ್ಜಿಗೂ ಕಾಯದೇ ವಾಹನಗಳ ಓಡಾಟ ನಡೆಯಿತು. ಜನರಿಂದಲೇ ಲೋಕಾರ್ಪಣೆಯಾಯಿತು.
ಈಗ ಹೊಸ ಸಮಸ್ಯೆ. ಫ್ಲೈಓವರ್ ಕುಂದಾಪುರ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ. ಪುರಸಭೆ ವ್ಯಾಪ್ತಿಯ ಜನರನ್ನು ಸಂಪರ್ಕದಿಂದಲೇ ಹೊರಗಿಟ್ಟಂತಿದೆ. ಆಧುನಿಕತೆಯ ಭರಾಟೆಯಲ್ಲೂ, ಪುರಸಭೆ ವ್ಯಾಪ್ತಿಯ ಜನರಿಗೆ ಒಂದೇ ಒಂದು ಮಾಹಿತಿಯನ್ನೂ ನೀಡದೆ ಕತ್ತಲಲ್ಲಿ ಇಟ್ಟ ಹೆದ್ದಾರಿ ಇಲಾಖೆ ಫ್ಲೈಓವರ್ ಮಾಡಿ ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಸಂಪರ್ಕವನ್ನೇ ನೀಡದೆ ವಂಚನೆ ಮಾಡಿದೆ. ಕಾಮಗಾರಿ ಆರಂಭವಾಗುವಾಗ, ಕಾಮಗಾರಿ ಆಗುತ್ತಿರುವ ವೇಳೆ, ಪೂರ್ಣವಾಗುವ ಸಂದರ್ಭದಲ್ಲಿ ಹೀಗೆ ಯಾವ ಸಮಯದಲ್ಲೂ ನಗರದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಎಲ್ಲೆಲ್ಲಿ ಪ್ರವೇಶಾವಕಾಶ ಇದೆ, ಎಲ್ಲೆಲ್ಲಿ ಏನೇನು ಇರಲಿದೆ ಎಂಬ ಮಾಹಿತಿಯನ್ನೇ ನೀಡಲಿಲ್ಲ. ಗುತ್ತಿಗೆದಾರ ಸಂಸ್ಥೆ ಕೂಡ ಈ ಕಣ್ಣಾಮುಚ್ಚಾಲೆ ಕಳ್ಳಾಟದಲ್ಲಿ ಸೇರಿಕೊಂಡಿತು. ಪರಿಣಾಮ ನಗರದ ಜನತೆಗೆ ಹೆದ್ದಾರಿ ಎಂಬುದು ಶಾಶ್ವತವಾಗಿ ಗಗನಕುಸುಮವಾಯಿತು.
ನಗರದಲ್ಲಿ 30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ, 2,332 ವಾಣಿಜ್ಯ ಕಟ್ಟಡಗಳು, 1,700 ವಾಣಿಜ್ಯ ಪರವಾನಿಗೆಗಳು, 5,331 ಮನೆಗಳು ಇವೆ. ಇಷ್ಟು ಜನರ ಪಾಲಿಗೆ ಫ್ಲೈಓವರ್ ಎನ್ನುವುದು ನಿಲುಕದ ನಕ್ಷತ್ರವಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಹೆದ್ದಾರಿಗೆ ಪ್ರವೇಶ -ನಿರ್ಗಮನ ಕೊಡದ ಕಾರಣ ನಗರವನ್ನು ಸಂಪರ್ಕರಹಿತವನ್ನಾಗಿಸುವ ಅಸ್ತ್ರವಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ, ವ್ಯಾಪಾರ ವಹಿವಾಟಿನ ಬೆಳವಣಿಗೆಗೆ, ಸ್ಥಳೀಯ ಆರ್ಥಿಕತೆ ಚೇತರಿಕೆಗೆ ಹೆದ್ದಾರಿ ಜತೆ ಸಂಪರ್ಕ ಅವಶ್ಯ. ಅದಿಲ್ಲವಾದರೆ ನಿರ್ದಿಷ್ಟವಾಗಿ ಕುಂದಾಪುರಕ್ಕೆಂದೇ ಬಂದವರಿಗಷ್ಟೇ ಸೀಮಿತ. ಹಾಗೆ ಬರುವವರಿಗೂ ಗೊಂದಲದ ಗೂಡಾಗಿದೆ ಹೆದ್ದಾರಿ.
ಹೆಜಮಾಡಿಯಲ್ಲಿ ಟೋಲ್ ವಿರೋಧಿಸಿ ಸ್ಥಳೀಯರಿಗೆ ಗ್ರಾಮ ಪಂಚಾಯತ್ ಪ್ರತ್ಯೇಕ ರಸ್ತೆಯನ್ನೇ ನಿರ್ಮಿಸಿ ತನ್ನ ಅಧಿಕಾರ ವ್ಯಾಪ್ತಿಯನ್ನು ತೋರಿಸಿಕೊಟ್ಟಿತ್ತು. ಹಾಗೆಯೇ ಪುರಸಭೆಗೆ ಬರುವ ಆದಾಯ ತಪ್ಪಿಸಿದ ಹೆದ್ದಾರಿ ಇಲಾಖೆ ವಿರುದ್ಧ ಪುರಸಭೆ ಕಾನೂನಿನ ವ್ಯಾಪ್ತಿಯಲ್ಲೇ ಕ್ರಮ ಕೈಗೊಂಡರೆ ಇಲಾಖೆ ತಲೆತಗ್ಗಿಸಬೇಕಾದೀತು. ಎರಡು ಇಲಾಖೆಗಳ ನಡುವೆ ಸಂಘರ್ಷಕ್ಕೆ ಕಾರಣವಾದೀತು. ಸಚಿವೆ, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮಾತಿಗೂ ಬೆಲೆ ಕೊಡದ ಇಲಾಖೆ ಅನಗತ್ಯ ಗೊಂದಲ ಮೂಡಿಸುತ್ತಿದೆ.
ನಿಗದಿತ ಅಂತರಕ್ಕಿಂತ ಕಡಿಮೆ ಅಂತರದಲ್ಲಿ ಲೆಕ್ಕಕ್ಕಿಂತ ಹೆಚ್ಚು ಟೋಲ್‌ಗೇಟ್ ಅಳವಡಿಸಿದ್ದರೂ ಮಾತಾಡದೆ ದುಡ್ಡು ಕೊಟ್ಟು ಹೋಗುವ ಜನ, ಸ್ಥಳೀಯರಿಗೆ ವಿನಾಯಿತಿ ಇಲ್ಲ ಎಂದಾಗಲೂ ಪರವಾಗಿಲ್ಲ ಎಂದು ಗೋಣಲ್ಲಾಡಿಸಿ ಹಣ ತೆತ್ತು ಹೋಗುವ ಜನ, ಹೆದ್ದಾರಿ ಕಾಮಗಾರಿ ಮುಗಿಯದೇ 10 ವರ್ಷವಾದರೂ,
ಇಂದಲ್ಲ ನಾಳೆ ಮುಗಿದೀತು ಎಂದು ಕಾಯುವ ತಾಳ್ಮೆಯ ಜನ, ಹೆದ್ದಾರಿಯಿಂದ ಊರಿಗೊಂದು ಪ್ರವೇಶವೇ ನೀಡದೆ ನಿರ್ಬಂಧ ಮಾಡಿದ್ದರೂ ನಮಗೇನು ಎನ್ನುವ ಜನರಿದ್ದಾರೆ ಎಂದು ಇಲಾಖೆ ತಿಳಿದಂತಿದೆ. ಜನರ ಪರ ಧ್ವನಿ ಎತ್ತುವವರು ಇದ್ದಾರೆ ಎನ್ನುವುದನ್ನು ಇಲಾಖೆ ಗಮನಿಸಲಿ.
–ಸಂ.