ವಿಜಯಪುರ: ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಸೇರಿದಂತೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ, ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಹಿನ್ನೆಲೆಯಲ್ಲಿ ನಗರದಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-13ರಲ್ಲಿರುವ ಟೋಲ್ ಕೇಂದ್ರದ ಎದುರು ಶುಕ್ರವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ರೈತರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು.
ರೈತ ಮುಖಂಡ ಭೀಮಶಿ ಕಲಾದಗಿ ನೇತೃತ್ವ ವಹಿಸಿ ಮಾತನಾಡಿ, ಮೂರು ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಮೌಖೀಕವಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಕಾಯ್ದೆ ವಾಪಸ್ ಪಡೆದಿರುವುದು ಖಾತ್ರಿಯಾಗಲು ಜೊತೆಗೆ ಸಂವಿಧಾನಬದ್ಧವಾಗಿ ಆಗಬೇಕಾದರೆ ಅದು ಸಂಸತ್ತಿನಲ್ಲಿ ಅಂಗೀಕಾರವಾಗಬೇಕು. ಅದೇ ರೀತಿ ಇನ್ನೂ ಕೆಲವು ಬೇಡಿಕೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವರ್ಷದ ಹೋರಾಟದಲ್ಲಿ ಸುಮಾರು 700 ಜನ ರೈತರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಎಲ್ಲ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಹೋರಾಟದಲ್ಲಿ ಮಡಿದ ರೈತರಿಗೆ ಸರ್ಕಾರ ಹುತಾತ್ಮ ರೈತರೆಂದು ಘೋಷಿಸುವಂತೆ ಒತ್ತಾಯಿಸಿದರು.
ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಸರ್ಕಾರ ಸ್ಥಳಾವಕಾಶ ನೀಡಬೇಕು. ಸರ್ಕಾರ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು. ವಿದ್ಯುತ್ ಕಾಯ್ದೆ 2020 ವಾಪಸ್ ಪಡೆಯಬೇಕು. ಹೋರಾಟ ನಿರತ ರೈತರ ಮೇಲೆ ಹಾಕಿರುವ ಮೊಕದ್ದಮೆ ತೆಗೆಯಬೇಕು. ರೈತರ ಮೇಲೆ ದಾಳಿ ಮಾಡಿ ರೈತರ ಕೊಲೆಗೆ ಕಾರಣರಾದವರಿಗೆ ಶಿಕ್ಷಿಸಬೇಕು ಎಂಬ ಹಕ್ಕೊತ್ತಾಯ ಮೊಳಗಿತು.
ಪ್ರತಿಭಟನೆಗೆ ಪ್ರಾಂತ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಪ್ರಗತಿಪರ ಸಂಘಟನೆಗಳ ವೇದಿಕೆ, ಮಹಿಳಾ ಸಂಘಟನೆ, ಜೆಸಿಟಿಯು ಕಾರ್ಮಿಕ ಸಂಘಟನೆ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ವೇಳೆ ಬಾಳು ಜೇವೂರ, ಅಣ್ಣಾರಾಯ ಈಳಿಗೇರ, ಶಕ್ತಿಕುಮಾರ, ಅಣ್ಣಾರಾಯ ಈಳಗೇರ, ಸಿ.ಎ. ಗಂಟೆಪ್ಪಗೋಳ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರ, ಇರ್ಫಾನ್ ಶೇಖ, ಸುರೇಖಾ ರಜಪೂತ, ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ, ಲಕ್ಷ್ಮಣ ಹಂದ್ರಾಳ, ಭಿ. ಭಗವಾನ್ ರೆಡ್ಡಿ, ಬಾಳು ಜೇವೂರ, ಮಹಾದೇವ ಲಿಗಾಡೆ, ಲಕ್ಷ್ಮಣ ಹಂದ್ರಾಳ, ತಿಪ್ಪರಾಯ ಹತ್ತರಕಿ, ಶ್ರೀಶೈಲ ನಿಮಂಗ್ರೆ, ಅಣ್ಣಾರಾಯ ಈಳಗೇರ, ರಾಮಣ್ಣ ಸಿರಾಗೋಳ, ಖಾಜೇಸಾಬ ಕೊಲ್ಹಾರ, ಶಕ್ತಿಕುಮಾರ ಉಕಮನಾಳ, ದಾನಮ್ಮ ಮಠ, ಸುರೇಖಾ ರಜಪೂತ, ರಾಜಮಾ ನದಾಫ್, ಸುಮಿತ್ರಾ ಗೊಣಸಗಿ, ಸುನಂದಾ ನಾಯಕ, ಭಾರತಿ ವಾಲಿ, ಮಲಿಕಸಾಬ್ ಟಕ್ಕಳಕಿ, ಸುವರ್ಣ ತಳವಾರ, ಸುರೇಖಾ ಕಡಪಟ್ಟಿ ಸೇರಿದಂತೆ ಇತರರಿದ್ದರು.