ಜೇವರ್ಗಿ: ಹೋರಾಟಗಾರರು, ವಿದ್ಯಾರ್ಥಿಗಳು, ರೈತರ ಮೇಲೆ ಉದ್ದೇಶಪೂರ್ವಕವಾಗಿ ದಾಖಲು ಮಾಡಿರುವ ಜಾತಿ ನಿಂದನೆ ಪ್ರಕರಣ ಕೈಬಿಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಹೋರಾಟಗಾರ ಶಿವಲಿಂಗ ಹಳ್ಳಿ ಮಾತನಾಡಿ, ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಧ್ವಜಗಳಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದಲ್ಲಿ ಮೂವರು ಯುವಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕರನ್ನು ಠಾಣೆಗೆ ಕರೆದೊಯ್ದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನು ಪ್ರಶ್ನಿಸಲು ಠಾಣೆಗೆ ಹೋದ ಕರವೇ ಹೋರಾಟಗಾರ ರಾಜು ಭಂಟನೂರ ಹಾಗೂ ಯಶವಂತರಾಯ ಭಂಟನೂರ ಮೇಲೂ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲಾಗಿದೆ. ಕೂಡಲೇ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣ ಕೈಬಿಡಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಕುರನಳ್ಳಿ ಮಲ್ಲಿಕಾರ್ಜುನ ಮಠದ ಮಾತೋಶ್ರೀ ಕಾವೇರಿ ಅಮ್ಮ, ಕರವೇ ಹೋರಾಟಗಾರರಾದ ಸಂಗಮೇಶ ಭೋರಟ್ಟಿ, ವೀರಶೈವ ಸಮಾಜದ ಅದ್ಯಕ್ಷ ಸಿದ್ದು ಸಾಹು ಅಂಗಡಿ, ಭಗವಂತ್ರಾಯ ಶಿವಣ್ಣವರ, ಶ್ರೀಶೈಲ ಬಿಲ್ಲಾಡ, ಶರಣು ಕರಿಸಿದ್ದಪ್ಪಗೋಳ, ಮೋನೇಶ ಬಡಿಗೇರ, ರಮೇಶ ಅವಂಟಿ, ನಿಂಗು ದೊಡ್ಮನಿ, ರಾಘು ಚಿಟಗಿ, ಅಭಿ ಇಟಗಾ, ಶಂಕರ ರಾಯಚೂರ, ಅರ್ಜುನ ರಂಜಣಗಿ, ಭೀಮು ಇಜೇರಿ, ರಾಜು ಮುದ್ದಾ, ಭೀಮು ಕಾಚಾಪೂರ, ರಾಧಾಬಾಯಿ ಭಂಟನೂರ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.