ದಾವಣಗೆರೆ: ರೈತರಿಗೆ ಮರಣ ಶಾಸನವಾಗಿರುವ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-4 ತಡೆ ನಡೆಸಿದ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ)ದ 50ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದರು.
ದೇಶದಲ್ಲಿ 2014ನೇ ಸಾಲಿಗಿಂತ ಮೊದಲು ಜಾರಿಯಲ್ಲಿದ್ದ ಭೂ ಸ್ವಾಧೀನ ಕಾಯ್ದೆ ರಿಯಲ್ ಎಸ್ಟೇಟ್‌ಗೆ ಬಹಳ ಅನುಕೂಲಕರವಾಗಿತ್ತು. ಅಕ್ರಮವಾಗಿ ರೈತರ ಜಮೀನು ಪಡೆಯಬಹುದಾಗಿತ್ತು. ಎಸ್‌ಇಝಡ್, ನಗರೀಕರಣದ ಹೆಸರಲ್ಲಿ ರೈತರ ಜಮೀನು ಪಡೆದುಕೊಂಡು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯಾಗಿತ್ತು. ಅದನ್ನ ಮನಗಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈಗ ರಾಜ್ಯ ಸರ್ಕಾರ ಆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡುತ್ತಿದೆ. ಕೂಡಲೇ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಲೇಬೇಕು ಎಂದು ರೈತರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತಂದು ಹಿಂದಿನ ಎಲ್ಲಾ ಅಂಶಗಳನ್ನ ಕೈ ಬಿಟ್ಟು ಜಿಲ್ಲಾಧಿಕಾರಿಗಳಿಗೆ ರೈತರ ಒಪ್ಪಿಗೆ ಇಲ್ಲದೆಯೂ ಹಿಡಿಗಂಟು ನೀಡಿ ಭೂಮಿ ಸ್ವಾಧೀನ ಮಾಡಿಕೊಳ್ಳುವಂತಹ ಅಧಿಕಾರವನ್ನು ನೀಡಿದೆ. ಒಂದೊಮ್ಮೆ ಜಿಲ್ಲಾಧಿಕಾರಿಗಳೇನಾದರೂ ರೈತರ ಒಪ್ಪಿಗೆ ಇಲ್ಲದೆಯೂ ಭೂ ಸ್ವಾಧೀನಕ್ಕೆ ಮುಂದಾದಲ್ಲಿ ರೈತರು ತಮ್ಮದೇ ಆದ ಶಿಕ್ಷೆ ನೀಡುವರು ಎಂದು ಎಚ್ಚರಿಸಿದರು.
ಈಗ ಎಲ್ಲಾ ಕಡೆ ಭೀಕರ ಬರಗಾಲ ಇದೆ. ಎಲ್ಲಾ ಕಡೆ ಕುಡಿಯುವ ನೀರು, ಮೇವಿನ ಸಮಸ್ಯೆ ಇದೆ. ಇಡೀ ನಾಡಿನ ಜನರು ಸಂಕಷ್ಟದಲ್ಲಿದ್ದಾರೆ. ಜನರು ಉದ್ಯೋಗಕ್ಕೆ ಅಲ್ಲ ನೀರಿಗಾಗಿಯೇ ಗುಳೇ ಹೋಗುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಮ್ಮನ್ನಾಳುತ್ತಿರುವವರು ಕುರ್ಚಿ ಉಳಿಸಿಕೊಳ್ಳುವಲ್ಲಿ ಗಮನಹರಿಸಿ ರಾಜ್ಯದ ಜನರನ್ನೆ ಮರೆತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಸಮರೋಪಾದಿಯಲ್ಲಿ ಅಗತ್ಯ ಪರಿಹಾರೋಪಾಯ ಕಾರ್ಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವ ಪ್ರತಿಯೊಂದು ಹಳ್ಳಿಗೆ ಓವರ್ ಬ್ರಿಡ್ಜ್, ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು. ಹೊಲ-ಗದ್ದೆಗಳಿಗೆ ಹೋಗಲು ರೈತರು ಟೋಲ್ ಕಟ್ಟುವಂತಾಗಿದೆ. ಕೂಡಲೇ ಟೋಲ್ ನಿಲ್ಲಿಸಬೇಕು. ಖರೀದಿ ಕೇಂದ್ರ ಪ್ರಾರಂಭಿಸಿ, ಭತ್ತ ಇತರೆ ಬೆಳೆ ಖರೀದಿಸಬೇಕು. ವೈಜ್ಞಾನಿಕ ಬೆಲೆ ನಿಗದಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕಾರ್ಯಾಧ್ಯಕ್ಷ ಹಾಳೂರು ನಾಗರಾಜಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಕೆಂಚನಹಳ್ಳಿ ಶೇಖರಪ್ಪ, ಆವರಗೆರೆ ಗೋಶಾಲೆ ಬಸವರಾಜ್, ಹುಚ್ಚವ್ವನಹಳ್ಳಿ ಗಣೇಶ್, ಹೊನ್ನೂರು ರಾಜು, ಮಲ್ಲಶೆಟ್ಟಿಹಳ್ಳಿ ಹನುಮೇಶ್ ಇತರರು ಇದ್ದರು. ಹೆದ್ದಾರಿ ತಡೆಯಿಂದ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು. ರೈತರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.