Advertisement

ಭೂಸ್ವಾಧಿಧೀನ ಮಸೂದೆ ಖಂಡಿಸಿ ಹೆದ್ದಾರಿ ತಡೆ

10:12 AM Jun 11, 2019 | Team Udayavani |

ರಾಯಚೂರು: ಸದನದಲ್ಲಿ ಚರ್ಚೆಗೆ ಒಳಪಡಿಸದೆ ಅಂಗೀಕರಿಸಿರುವ ರೈತ ವಿರೋಧಿ ಭೂಸ್ವಾಧೀನ ಮಸೂದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ನೇತೃತ್ವದಲ್ಲಿ ರೈತರು ಸೋಮವಾರ ಹೈದರಾಬಾದ್‌-ರಾಯಚೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Advertisement

ಸಮೀಪದ ವಡ್ಲೂರು ಕ್ರಾಸ್‌ ಬಳಿ ಸೋಮವಾರ ಬೆಳಗ್ಗೆ 9:30ಕ್ಕೆ ರಸ್ತೆ ಮಧ್ಯದಲ್ಲಿಯೇ ಪ್ರತಿಭಟನಾಕಾರರು ಧರಣಿ ಕುಳಿತರು. ಇದರಿಂದ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದಂತಾಯಿತು. ಮುಂಜಾಗ್ರತೆ ವಹಿಸಿದ್ದ ಪೊಲೀಸರು ಎರಡು ಕಡೆ ಬ್ಯಾರಿಕೇಡ್‌ ಅಳವಡಿಸುವ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಿದರು. ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯವಾಗಿ ಶಕ್ತಿನಗರದಿಂದ ಗಂಜಳ್ಳಿ ಶಾಖವಾದಿ, ಯರಮರಸ್‌ ಕ್ಯಾಂಪ್‌ ಮಾರ್ಗವಾಗಿ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ, ಸರಕು ವಾಹನಗಳ ಓಡಾಟ ನಿಷೇಧಿಸಿದ್ದರಿಂದ ಎರಡೂ ಬದಿ ನೂರಾರು ಲಾರಿಗಳು ರಸ್ತೆ ಬದಿಯಲ್ಲೇ ನಿಂತಿದ್ದವು. ಆದರೆ, ಸಾರಿಗೆ ಸೌಕರ್ಯ ಸಿಗದೆ ಚಿಕ್ಕಸುಗೂರು, ಹೆಗ್ಗಸಹಳ್ಳಿ, ಶಕ್ತಿನಗರ, ಯರಮರಸ್‌ ರಾಯಚೂರಿಗೆ ಓಡಾಡುವ ಪ್ರಯಾಣಿಕರು ಸುತ್ತುವರಿದು ಬರುವಂತಾಗಿತ್ತು.

ಪ್ರತಿಭಟನೆ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ರಾಜ್ಯ ಸರ್ಕಾರ ಸದನದಲ್ಲಿ ಚರ್ಚೆಗೆ ತರದೆ ಭೂಸ್ವಾಧಿಧೀನ ಮಸೂದೆ ಕಾಯ್ದೆಯನ್ನು ಅಂಗೀಕರಿಸಿದೆ. ಈ ಮಸೂದೆಯಲ್ಲಿ ಸಾಕಷ್ಟು ರೈತ ವಿರೋಧಿ ಅಂಶಗಳಿವೆ. ಈ ಕಾಯ್ದೆಯಿಂದ ರೈತರಿಗೆ ತಮ್ಮ ಭೂಮಿ ಮೇಲೆ ಹಕ್ಕಿಲ್ಲದಂತಾಗುತ್ತದೆ. ಹಿಂದೆ ಕೇಂದ್ರ ಸರ್ಕಾರ ಇಂಥ ಮಸೂದೆ ಜಾರಿಗೆ ಮುಂದಾದಾಗ ಕೆಲ ರಾಜ್ಯಗಳು ಪ್ರಬಲವಾಗಿ ವಿರೋಧಿಸಿದ್ದವು. ಹೀಗಾಗಿ ಮಸೂದೆ ಹಿಂಪಡೆದು ಆಯಾ ರಾಜ್ಯಗಳ ವಿವೇಚನೆಗೆ ಬಿಡಲಾಗಿತ್ತು. ಈ ಅವಕಾಶ ಬಳಸಿಕೊಂಡ ಸಮ್ಮಿಶ್ರ ಸರ್ಕಾರ ಚರ್ಚೆಗೂ ತರದೆ ಮಸೂದೆ ಅಂಗೀಕರಿಸಿದೆ ಎಂದು ದೂರಿದರು.

ಈಗಾಗಲೇ ಜಿಲ್ಲೆಯ ಸಾಕಷ್ಟು ರೈತರು ಜಮೀನು ಕಳೆದುಕೊಂಡಿದ್ದು, ಸೂಕ್ತ ಪರಿಹಾರ ಸಿಗದೆ ಸಮಸ್ಯೆಗೆ ತುತ್ತಾಗಿದ್ದಾರೆ. ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಆಗಿನ ಕಾಲಕ್ಕೆ ಎಕರೆಗೆ ಕೇವಲ 50 ಸಾವಿರ ರೂ. ಪರಿಹಾರ ನೀಡಿದ್ದು, ಈಗ ಕನಿಷ್ಠ 30-35 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಂಜೆ 4 ಗಂಟೆವರೆಗೂ ಹೋರಾಟ ಮುಂದುವರಿಯಿತು. ಸಂಜೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಡಿ.ಕಿಶೋರಬಾಬು, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಹೋರಾಟ ಬಿಡುವಂತೆ ಮನವಿ ಮಾಡಿದರು. ಆದರೆ, ಜಿಲ್ಲಾಧಿಕಾರಿ ಸಭೆ ನಡೆಸಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಹೊರತು ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಭೆ ನಡೆಸುವ ಭರವಸೆ ನೀಡಿದ್ದರಿಂದ ಹೋರಾಟ ಮೊಟಕುಗೊಳಿಸಲಾಯಿತು.

Advertisement

ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಉಮಾದೇವಿ, ಬಸವರಾಜ, ಹನುಮೇಶ, ಕೃಷ್ಣ, ನರಸಿಂಹಲು ಬಾಪುರ, ಶರಣಪ್ಪ ಮಳ್ಳಿ ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next