ಮಂಗಳೂರು: ಉನ್ನತ ಶಿಕ್ಷಣದ ಪಠ್ಯಪುಸ್ತಕಗಳು ಸ್ಥಳೀಯ ಭಾಷೆಯಲ್ಲಿ ಸಿಗುವ ಬಗ್ಗೆ ಈಗಾಗಲೇ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ, ದೇಶದಲ್ಲೇ ಮೊದಲ ಬಾರಿಗೆ ಉನ್ನತ ಶಿಕ್ಷಣದ ಪಠ್ಯಪುಸ್ತಕಗಳು ಕನ್ನಡದಲ್ಲಿ ಶೀಘ್ರ ಲಭ್ಯವಾಗಲಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಮಂಗಳೂರು ವಿ.ವಿ.ಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಬುಧವಾರ ಜರಗಿದ ವಿ.ವಿ.ಯ 41ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ವಿ.ವಿ.ಗಳ ಕುಲಪತಿಗಳು ಹಾಗೂ ತಜ್ಞರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಭಾಷೆಯಲ್ಲಿ ಅಧ್ಯಯನ ಮಾಡುವುದು ದೇಶದ ಪ್ರಗತಿಯಲ್ಲಿ ಬಹುಮುಖ್ಯ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಆತ್ಮನಿರ್ಭರ ಭಾರತ ಸರಕಾರದ ಕನಸು. ಅದನ್ನು ಈಡೇರಿಸಲು ವಿದ್ಯಾವಂತ ಸಮಾಜ ಕಟಿಬದ್ಧವಾಗಬೇಕು. ಭಾರತ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶ. ಹೀಗಾಗಿ ವಿಶ್ವಗುರುವಿನ ಸ್ಥಾನಕ್ಕಾಗಿ ಯುವಜನರ ಪಾತ್ರ ಅಮೂಲ್ಯವಾದದ್ದು ಎಂದು ಹೇಳಿದ ಅವರು, ಸ್ವಾತಂತ್ರದ ಅಮೃತಕಾಲ ನಮಗೆ ಕರ್ತವ್ಯದ ಕಾಲ. ನಮ್ಮ ಜಲ, ವಾಯು, ಕಾಡಿನ ಸಂರಕ್ಷತೆ ಈಗಿನ ತುರ್ತು ಅಗತ್ಯ ಎಂದು ಹೇಳಿದರು.
ಪರಿಸರದೆಡೆಗೆ ಕಾಳಜಿ ಬೆಳೆಸಿ: ಪ್ರೊ| ಶರ್ಮ
ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಪ್ರೊ| ಎಸ್.ಸಿ. ಶರ್ಮ ಅವರು ಮಾತನಾಡಿ, ಪರಿಸರದೆಡೆಗೆ ಸ್ವಾರ್ಥರಹಿತ ಕಾಳಜಿ ನಮ್ಮಲ್ಲಿ ಬೆಳೆಯಬೇಕು. ನಮ್ಮ ಪ್ರಾಚೀನ ಜ್ಞಾನದ ಅರಿವು, ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಉಳಿವು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಒಳ್ಳೆಯ ಅಂಶಗಳ ಬಗ್ಗೆ ಅರಿವು ಇರಬೇಕಾಗಿದೆ ಎಂದರು.
Related Articles
ವಿ.ವಿ.ಗಳು ರಚನಾತ್ಮಕವಾಗಿ ಬದಲಾವಣೆ ಹೊಂದುತ್ತಿವೆ. ಬಹುಮಾಧ್ಯಮದ ರೀತಿಯಲ್ಲಿ ಕೆಲಸ ಮಾಡುವಂತಹ ಹೊಣೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಕಷ್ಟು ಬದಲಾವಣೆಗಳು ವಿ.ವಿ. ಶಿಕ್ಷಣ ಪದ್ದತಿಯಲ್ಲಿ ಕಾಣಲಾಗುತ್ತಿರುವುದು ಅಭಿನಂದನೀಯ. ಮಂಗಳೂರು ವಿ.ವಿ. ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಮೈಲಿಗಲ್ಲು ಬರೆದಿದೆ ಎಂದು ಹೇಳಿದರು.
ವಿ.ವಿ. ಕುಲಪತಿ ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಪ್ರಸ್ತಾವಿಸಿದರು. ವಿ.ವಿ. ಹಲವು ವಿಶೇಷತೆ ಮತ್ತು ಹೊಸತನಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತ ಬರುತ್ತಿದೆ ಎಂದರು.
ಕುಲಸಚಿವ (ಆಡಳಿತ) ಪ್ರೊ| ಕಿಶೋರ್ ಕುಮಾರ್ ಸಿ.ಕೆ., ಕುಲಸಚಿವ (ಪರೀಕ್ಷಾಂಗ) ಪ್ರೊ| ರಾಜು ಕೃಷ್ಣ ಚಲನ್ನವರ್, ವಿ.ವಿ.ಯ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ| ಧನಂಜಯ ಕುಂಬ್ಳೆ ಮತ್ತು ಪ್ರೊ| ಪ್ರೀತಿ ಕೀರ್ತಿ ಡಿ’ಸೋಜಾ ನಿರೂಪಿಸಿದರು.
ಮೂವರು ಸಾಧಕರಿಗೆ ಗೌರವ ಡಾಕ್ಟರೆಟ್ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಕಣಚೂರ್ ಗ್ರೂಪ್ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಜಿ ಯು.ಕೆ.ಮೋನು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಉದ್ಯಮಿ ಜಿ. ರಾಮಕೃಷ್ಣ ಆಚಾರ್ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಗಾಗಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನಿಸಿದರು.
55 ಮಂದಿಗೆ ಚಿನ್ನದ ಪದಕ
ಘಟಿಕೋತ್ಸವದಲ್ಲಿ 115 ಮಂದಿಗೆ (ಕಲೆ 29, ವಿಜ್ಞಾನ 61, ವಾಣಿಜ್ಯ 22, ಶಿಕ್ಷಣ 3)ಪಿಎಚ್ಡಿ ಪ್ರದಾನಿಸಲಾಯಿತು. ಇದರಲ್ಲಿ ಏಳು ಮಂದಿ ವಿದೇಶಿಯರು. ಉಳಿದಂತೆ, 55 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ ಪ್ರದಾನಿಸಲಾಯಿತು. 199 ಮಂದಿ ರ್ಯಾಂಕ್ ವಿಜೇತರಲ್ಲಿ ಪ್ರಥಮ ರ್ಯಾಂಕ್ ಪಡೆದ 71 ಮಂದಿಗೆ ರಾಜ್ಯಪಾಲರು ಪ್ರಮಾಣ ಪತ್ರ ಪ್ರದಾನಿಸಿದರು.
ಸಾಂಕೇತಿಕವಾಗಿ ಕೆಲವು ಮಂದಿಗೆ ರಾಜ್ಯಪಾಲರು ಪದವಿ ಪ್ರದಾನಿಸಿದ್ದು, ಉಳಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಳಿಕ ವಿ.ವಿ. ಕುಲಪತಿಗಳು ಪದವಿ ಪ್ರದಾನಿಸಿದರು.