Advertisement

ತಲೆ ಎತ್ತಿತು ಉನ್ನತ ಶಿಕ್ಷಣ ಅಕಾಡೆಮಿ ಭವ್ಯ ಕಟ್ಟಡ

09:32 AM May 04, 2022 | Team Udayavani |

ಧಾರವಾಡ: ಶಿಕ್ಷಣ ಅಂದರೆ ಬರೀ ಕ್ಲಾಸ್‌ರೂಮ್‌ ಗಳಲ್ಲ, ಶಿಕ್ಷಣ ಅಂದರೆ ಗುಣಮಟ್ಟ. ತರಬೇತಿ ಅಂದರೆ ಬರೀ ಬೋಧನೆಯಲ್ಲ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸರಿಸಮವಾಗಿರುವ ಪಟ್ಟುಗಳು. ವಿಶ್ವದ ಎಲ್ಲಾ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಷ್ಟೇ ಬಲಿಷ್ಠತೆ ಇಲ್ಲಿನ ಶಿಕ್ಷಣಕ್ಕೂ ಬರಬೇಕು. ಅದಕ್ಕಾಗಿಯೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ವಿದ್ಯಾರ್ಥಿಗಳು ರೂಪುಗೊಳ್ಳಲು ಬೋಧಕರಿಗೆ ಶಿಸ್ತುಬದ್ಧ ತರಬೇತಿ ನೀಡಬೇಕು.

Advertisement

ಹೌದು, ಇಂತಹ ಧ್ಯೇಯಗಳನ್ನಿಟ್ಟುಕೊಂಡು ಕಾರ್ಯಾರಂಭ ಮಾಡಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಧ್ಯಾಪಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿ ಸಾಗಿದ್ದು, ಈ ವರೆಗೂ 3500ಕ್ಕೂ ಅಧಿಕ ಬೋಧಕರಿಗೆ ಇಂದಿನ ಹೈಟೆಕ್‌ ಯುಗದ ಶಿಕ್ಷಣ ವ್ಯವಸ್ಥೆಯ ಕುರಿತು ತರಬೇತಿ ನೀಡಿ ಮುಗಿಸಿದೆ.ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ರೂಪುರೇಷೆಗಳನ್ನು ಸಿದ್ಧಪಡಿಸಿ ಅದನ್ನು ಜಾರಿಗೊಳಿಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ.

19ನೇ ಶತಮಾನದಲ್ಲಿಯೇ ಇಲ್ಲಿ ಡಯಟ್‌ ಕಾರ್ಯ ಆರಂಭಿಸಿ, ಪ್ರಾಥಮಿಕ ಶಿಕ್ಷಣ ನೀಡುವ ಶಿಕ್ಷಕರಿಗೆ ತರಬೇತಿ ನೀಡುವ ಮಹತ್‌ ಕಾರ್ಯ ಮಾಡಿದ್ದು, ಇದೀಗ ಉನ್ನತ ಶಿಕ್ಷಣ ಬಲವರ್ಧನೆಗೆ ಈ ಅಕಾಡೆಮಿ ಭರಪೂರ ಕ್ರಿಯಾಯೋಜನೆ ರೂಪಿಸಿಕೊಂಡಿದೆ. ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಹೈಟೆಕ್‌ ಸ್ವರೂಪದ ಕಟ್ಟಡ ಮತ್ತು ವ್ಯವಸ್ಥೆ 2022 ರ ನವೆಂಬರ್‌ ವೇಳೆಗೆ ಸಜ್ಜಾಗಲಿದ್ದು, ಉನ್ನತ ಶಿಕ್ಷಣ ಅಕಾಡೆಮಿಯ ಪೂರ್ಣ ಪ್ರಮಾಣದ ಕಾರ್ಯ ಆರಂಭಗೊಳ್ಳಲಿದೆ. ಕೆಲವೇ ದಿನಗಳಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ದೈತ್ಯ ಕ್ಯಾಂಪಸ್‌, ಸುಂದರ ಕಟ್ಟಡವೂ ಸಜ್ಜಾಗಲಿದೆ.

 ಶಿಕ್ಷಣ ಗುಚ್ಛಕ್ಕೆ ಒತ್ತು: ಸರ್‌ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡ, ಡೆಪ್ಯುಟಿ ಚೆನ್ನಬಸಪ್ಪ, ಡಾ| ಡಿ.ಸಿ. ಪಾವಟೆ, ಡಾ| ಮೆಣಸಿನಕಾಯಿ ಅವರಂತಹ ಮಹನೀಯರೆಲ್ಲರೂ ಒಂದಲ್ಲ ಒಂದು ಬಗೆಯ ಶಿಕ್ಷಣದ ತರಬೇತಿ ಭಾಗವನ್ನು ಇದೇ ಊರಿನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದರಿಂದಲೇ ಇಲ್ಲಿ ಶಿಕ್ಷಣ ಸಮುತ್ಛಯವೇ ತಲೆ ಎತ್ತಿದಂತಾಗಿದೆ.

ಕಾನೂನು ಓದುವವರಿಗೊಂದು ವಿಶ್ವವಿದ್ಯಾಲಯ, ಕಲೆ ಓದುವವರಿಗೊಂದು ವಿಶ್ವವಿದ್ಯಾಲಯ, ಕೃಷಿ ಕಲಿಕೆ ಮತ್ತು ಪ್ರಯೋಗಕ್ಕೊಂದು ದೈತ್ಯ ವಿಶ್ವವಿದ್ಯಾಲಯ, ತಾಂತ್ರಿಕ ಶಿಕ್ಷಣಕ್ಕೆ ಐಐಟಿ, ಮಾಹಿತಿ ತಂತ್ರಜ್ಞಾನಕ್ಕೆ ಐಐಐಟಿ, ಸಾಲದ್ದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ಹತ್ತಾರು ಖಾಸಗಿ ಕರಿಯರ್‌ ಅಕಾಡೆಮಿಗಳು. ಒಟ್ಟಲ್ಲಿ ಇದು ಶಿಕ್ಷಣ ಕಾಶಿ. ಇಂತಹ ಹತ್ತಾರು ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಶಿಕ್ಷಣ ವ್ಯವಸ್ಥೆಗಳನ್ನು ಒಟ್ಟೊಟ್ಟಿಗೆ ಸೇರಿಸಿಕೊಂಡು ಒಟ್ಟಾಗಿ ಕೆಲಸ ಮಾಡುವ ಕುರಿತು ಕೂಡ ಉನ್ನತ ಶಿಕ್ಷಣ ಅಕಾಡೆಮಿ ಚಿಂತನೆ ನಡೆಸಿದೆ. ಇದೆಲ್ಲವೂ ಅಕಾಡೆಮಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಕೂಡಲೇ ಶುರುವಾಗಲಿದೆ.

Advertisement

ವಿದೇಶಿ ವಿವಿಗಳ ಜೊತೆಗೆ ಒಪ್ಪಂದ: ಇನ್ನು ಉನ್ನತ ಶಿಕ್ಷಣ ಅಕಾಡೆಮಿಯು ಕೇವಲ ದೇಶದೊಳಗಿನ ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ ವಿದೇಶಿ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣದ ಬಗ್ಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಜೊತೆಗೆ ಒಡಂಬಡಿಕೆಗೆ ಸಜ್ಜಾಗಿದೆ. ಈಗಾಗಲೇ ಪೆನ್ಸೆಲೇನಿಯಾ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದ ಏರ್ಪಟ್ಟಿದ್ದು, ಸ್ಪೇನ್‌ ವಿಶ್ವವಿದ್ಯಾಲಯದ ಜೊತೆಗೂ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ವಿಧಾನಗಳ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಕಟ್ಟಡದ ಮೊದಲ ಭಾಗ ಕಳೆದ ವರ್ಷವೇ ಪೂರ್ಣ: 2018 ರಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿಯ ಅಗತ್ಯವನ್ನು ಅರಿತು ಹಳಿಯಾಳ ರಸ್ತೆಗೆ ಹೊಂದಿಕೊಂಡಿರುವ ಕವಿವಿ ಕ್ಯಾಂಪಸ್‌ನಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ಉನ್ನತ ಶಿಕ್ಷಣ ತರಬೇತಿ ನೀಡುವ ಅಕಾಡೆಮಿ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುಮೋದನೆ ದೊರಕಿಸಿಕೊಟ್ಟರು. ಕಟ್ಟಡದ ಮೊದಲ ಭಾಗ ಕಳೆದ ವರ್ಷವೇ ಪೂರ್ಣಗೊಂಡಿದ್ದು, ಇಲ್ಲಿ ಹಾಸ್ಟೆಲ್‌ ಕಾರ್ಯಾರಂಭ ಮಾಡಿದೆ. ಕೊರೊನಾ ಅಡ್ಡಿಯಾತಂಕವೂ ದೂರವಾಗಿದ್ದು, ಸದ್ಯಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿದೆ. ಕಟ್ಟಡ ಸಜ್ಜಾದ ನಂತರ ಈಗಿರುವ ಐದು ಪಟ್ಟು ಕಾರ್ಯಕ್ಷೇತ್ರವನ್ನು ಅಕಾಡೆಮಿ ಹೆಚ್ಚಿಸಿಕೊಳ್ಳಲಿದೆ. ಅದಕ್ಕಾಗಿ ಅಗತ್ಯವಿರುವ ನೌಕರ ವ್ಯವಸ್ಥೆಯನ್ನು ಸರ್ಕಾರ ಒದಗಿಸುವ ಭರವಸೆ ನೀಡಿದೆ.

ಹೊಸ ಸಂಶೋಧನೆ, ಶಿಕ್ಷಣ ಗುಣಮಟ್ಟ ಹೆಚ್ಚಳ, ಡಿಜಿಟಲ್‌ ತಂತ್ರಜ್ಞಾನದೊಂದಿಗೆ ಶಿಕ್ಷಣ ಒದಗಿಸುವಂತೆ ಮಾಡುವುದು, ಅದಕ್ಕಾಗಿ ಪ್ರಾಧ್ಯಾಪಕರನ್ನು ಸಜ್ಜುಗೊಳಿಸುವ ಸವಾಲುಗಳು ಅಕಾಡೆಮಿಯ ಮುಂದಿವೆ. ಇವೆಲ್ಲದಕ್ಕೂ ಅಕಾಡೆಮಿ ಸಜ್ಜಾಗಿದೆ. ಪ್ರೊ| ಶಿವಪ್ರಸಾದ, ನಿರ್ದೇಶಕರು, ಉನ್ನತ ಶಿಕ್ಷಣ ಅಕಾಡೆಮಿ, ಕವಿವಿ, ಧಾರವಾಡ          

-ಬಸವರಾಜ ಹೊಂಗಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next