Advertisement

“ಆ್ಯಂಬುಲೆನ್ಸ್‌ ತಡೆರಹಿತ ಸಂಚಾರಕ್ಕೆ ಸಹಕರಿಸಿ’ : ಹೈಕೋರ್ಟ್‌

11:26 AM Dec 03, 2022 | Team Udayavani |

ಬೆಂಗಳೂರು: “ಆ್ಯಂಬುಲೆನ್ಸ್‌ಗಳ ತಡೆ ರಹಿತ ಸಂಚಾರದ ವಿಚಾರದಲ್ಲಿ ಎಲ್ಲದಕ್ಕೂ ಸರ್ಕಾರವನ್ನು ಹೊಣೆ ಮಾಡಲಾಗುವುದಿಲ್ಲ. ನಾಗರಿಕರೂ ಸಹ ಆ್ಯಂಬುಲೆನ್ಸ್‌ಗಳು ಬಂದಾಗ ಅವುಗಳ ತಡೆ ರಹಿತ ಸಂಚಾರಕ್ಕೆ ದಾರಿ ಮಾಡಿಕೊಡಬೇಕು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ರಾಜ್ಯದಲ್ಲಿರುವ ಎಲ್ಲ ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್‌ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ “ಭಾರತ್‌ ಪುನರುತ್ಥಾನ ಟ್ರಸ್ಟ್‌’ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಆ್ಯಂಬುಲೆನ್ಸ್‌ಗಳ ತಡೆರಹಿತ ಸಂಚಾರಕ್ಕೆ ವ್ಯವಸ್ಥೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದುಕೊಂಡ ನ್ಯಾಯಪೀಠ, ಸರ್ಕಾರ ಮಾಡು ತ್ತಿರುವ ಕೆಲಸ ತೃಪ್ತಿಕರವಾಗಿದೆ. ಪ್ರಕರಣದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿರುವುದು ನ್ಯಾಯಾಲಯಕ್ಕೆ ಸಮಧಾನವಿದೆ. ಆದರೆ, ಎಲ್ಲಾದಕ್ಕೂ ಸರ್ಕಾರವನ್ನೇ ಹೊಣೆ ಮಾಡಲಾಗುವುದಿಲ್ಲ. ನಾಗರಿಕರೂ ಸಹ ಆ್ಯಂಬುಲೆನ್ಸ್‌ಗಳು ಬಂದಾಗ ಅವುಗಳ ಸಂಚಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟಿತು.

3,386 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್‌: ಇದಕ್ಕೂ ಮೊದಲು ಆಂಬ್ಯುಲೆನ್ಸ್‌ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಬೇಕು ಎಂದು ನ.8ರಂದು ಹೈಕೋರ್ಟ್‌ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ಸಲ್ಲಿಸಿದರು. ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆ್ಯಂಬುಲೆನ್ಸ್‌ಗಳಿವೆ. ಅವುಗಳನ್ನು ಸರ್ಕಾರ ತಪಾಸಣೆ ನಡೆಸಿದಾಗ 3,368ಗಳಿಗೆ ಮಾತ್ರ ಜಿಪಿಎಸ್‌ ಅಳವಡಿಸಿರುವುದು ಕಂಡುಬಂದಿದೆ. ಉಳಿದ ಆ್ಯಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನೂ ಸಂಚರಿಸುವ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲಾ ಆ್ಯಂಬುಲೆನ್ಸ್‌ಗಳ ಚಾಲಕರಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಸಂಯೋಜಿತ ಆ್ಯಂಬುಲೆನ್ಸ್‌ ಸೇವೆಗೆ ಒದಗಿಸಲು ಟೆಂಡರ್‌ ಕರೆಯಲಾಗಿತ್ತು. ಆದರೆ, ಟೆಂಡರ್‌ಗೆ ಈವರೆಗೂ ಯಾವುದೇ ಬಿಡ್‌ ಸ್ವೀಕರಿಸಿಲ್ಲ. ಆದ್ದರಿಂದ ಮುಂದಿನ 15 ದಿನಗಳಲ್ಲಿ ಹೊಸ ದಾಗಿ ಟೆಂಡರ್‌ ಅಧಿಸೂಚನೆಯನ್ನು ಹೊರಡಿಸಲು ಸರ್ಕಾರ ಸೂಚಿಸಿದೆ ಎಂದು ಮಾಹಿತಿ ನೀಡಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, 15 ದಿನ ಅವಧಿಗೆ ಕಾಯದೆ ಟೆಂಡರ್‌ಗೆ ಅನುಮೋದನೆ ನೀಡಬೇಕು. ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಕೊಡಬೇಕು. ಆ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆ್ಯಂಬುಲೆನ್ಸ್‌ ಚಾಲಕರ ದತ್ತಾಂಶ ಪಡೆದುಕೊಳ್ಳಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಆ್ಯಂಬುಲೆನ್ಸ್‌ ಸಂಚರಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪೊಲೀಸರಿಗೆ ಸಹಾಯವಾಗುತ್ತದೆ. ಹುಸಿ ಕರೆಗಳನ್ನು ಪರಿಶೀಲನೆ ಮಾಡಲು ಇದು ಸಹಾಯವಾಗುತ್ತದೆ ಎಂದು ಹೇಳಿ ವಿಚಾರಣೆಯನ್ನು ಜ.11ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next