ಬೆಂಗಳೂರು: ಅನುಮತಿ ನೀಡಿಲ್ಲ ಎಂದಾದ ಮೇಲೆ ಪಾದಯಾತ್ರೆ ತಡೆಯಲು ಹಿಂಜರಿಕೆ ಏಕೆ. ಸರ್ಕಾರ ಅಷ್ಟೊಂದು ಅಸಮರ್ಥವಾಗಿದೆಯಾ? ನ್ಯಾಯಾಲಯ ನೆರವಿಗೆ ಬರಬೇಕು ಎಂದು ಸರ್ಕಾರ ನಿರೀಕ್ಷಿಸುತ್ತಿದೆಯಾ?
ಇದು “ನಮ್ಮ ನೀರು ನಮ್ಮ ಹಕ್ಕು” ಹೆಸರಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ವಿರೋಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಕೇಳಿದ ಪರಿ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈ ಅಪಾಯಕಾರಿ ಸಂದರ್ಭದಲ್ಲಿ ಜನ ಸೇರುವ ರ್ಯಾಲಿ, ಧರಣಿ, ಪ್ರದರ್ಶನ, ಮೆರವಣಿಗೆಗಳಿಗೆ ನಿರ್ಬಂಧ ಹೇರಿದ್ದರೂ, ಅವುಗಳಿಗೆ ಅವಕಾಶ ನೀಡುತ್ತಿರುವುದು ಹೇಗೆ? ವಿಶೇಷವಾಗಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹೇಗೆ ಮುಂದುವರಿಸಿದೆ, ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲವೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಅದೇ ರೀತಿ ಪಾದಯಾತ್ರೆ ನಡೆಸಲು ಅನುಮತಿ ಪಡೆಯಲಾಗಿದೆಯೇ? ಪಾದಯಾತ್ರೆ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ (ಜ.14) ಮುಂದೂಡಿತು.