ಬೆಂಗಳೂರು: ವಿವಾಹಿತ ಮಹಿಳೆಗೆ ತಂದೆಯ ಜಾತಿಯೇ ಆಧಾರ ಎಂದು ಹೇಳಿರುವ ಹೈಕೋರ್ಟ್, ತಂದೆಯ ಜಾತಿಯನ್ನು ಜನ್ಮದ ಆಧಾರದ ಮೇಲೆ ಮಕ್ಕಳು ಪಡೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಅನ್ಯ ಜಾತಿಯ ವ್ಯಕ್ತಿಯನ್ನು ವಿವಾಹವಾಗಿ ಪತಿಯ ಜಾತಿಯ ಆಧಾರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಹಿಳೆಯೊಬ್ಬರ ಪ್ರಕರಣದಲ್ಲಿ ಈ ರೀತಿ ತೀರ್ಪು ನೀಡಿರುವ ಹೈಕೋರ್ಟ್, ವಿವಾಹದ ಅನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೇಳಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿರುವ ಆಧಾರದ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನದಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ.ಜಿ. ಅರ್ಚನಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣವೇನು? :
ಅರ್ಚನಾ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯ ಗಳಿಸಿದ್ದರು. ಇದರಿಂದ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಅಭಿಲಾಷ್ ಅವರು ಚುನಾವಣ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆ. 1ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.