Advertisement

ಸ್ಥಳೀಯ ಬೀಜಗಳಿಂದ ಹೆಚ್ಚಿನ ಇಳುವರಿ

03:11 PM Aug 24, 2020 | Suhan S |

ಸವಣೂರು: ರೈತರು ಹೆಚ್ಚಿನ ಇಳುವರಿ ಪಡೆಯುವ ಆಸೆಯಿಂದ ಯಾವುದೋ ಬೀಜಗಳನ್ನು ಬಿತ್ತನೆ ಮಾಡುವದಕ್ಕಿಂತ, ಸ್ಥಳೀಯ ಬೀಜಗಳನ್ನು ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮಾಡುವ ಮೂಲಕ ಬಿತ್ತನೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು ಎಂದು ಪ್ರಗತಿಪರ ರೈತ ಅಂದಾನಗೌಡ ಪಾಟೀಲ ತಿಳಿಸಿದರು.

Advertisement

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ಬರದೂರ ಗ್ರಾಮದ ರೈತ ಅಂದಾನಗೌಡ ಪಾಟೀಲ ಮತ್ತು ಭರಮಪ್ಪ ಅವರ ಕ್ಷೇತ್ರಗಳಲ್ಲಿ ಆಯೋಜಿಸಿದ್ದ ಹೆಸರು ಬೆಳೆಯ ಸಮಗ್ರ ನಿರ್ವಹಣೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಗಳಿಗೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತವಾಗುತ್ತಿದೆ. ಇದನ್ನು ತಡೆಗಟ್ಟಲು ಸಗಣಿ ಗೊಬ್ಬರ, ಎರೆಹುಳು ಗೊಬ್ಬರ ಸೇರಿದಂತೆ ಜೈವಿಕ ಗೊಬ್ಬರಗಳ ಬಳಕೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ., ಹೆಸರು ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಡಿ.ಜಿ.ಜಿ.ವ್ಹಿ.-2 ತಳಿಯ ಬೀಜಗಳನ್ನು ಸಮಗ್ರ ಬೆಳೆ ಪದ್ಧತಿಗಳಾದ ಜೈವಿಕ ಗೊಬ್ಬರ ರೈಜೋಬಿಯಂದಿಂದ ಬೀಜೋಪಾಚಾರ ಮಾಡುವುದು, ಬಿತ್ತಿದ 25 ದಿನಗಳ ನಂತರ 2 ಸಲ ಎಡೆಕುಂಟೆ ಹಾಯಿಸಿ, 45 ದಿನಗಳ ನಂತರ ಪೋಷಕಾಂಶಗಳ ಸಿಂಪಡಣೆ ಮಾಡುವದರಿಂದ ಹೆಸರು ಕಾಯಿಗಳು ಉದ್ದವಾಗಿ ಬೆಳೆದು ಕಾಯಿಗಳ ಸಂಖ್ಯೆ ಕೂಡಾ ಹೆಚ್ಚಾಗಿ ಬರುತ್ತದೆ. ಇದನ್ನು 70-75 ದಿನಗಳ ನಂತರ ಕಟಾವು ಮಾಡುವುದರಿಂದಇಳುವರಿ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ, ರೈತರು ಲಾಭ ಪಡೆಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ತಜ್ಞರಾದ ಡಾ| ಕೆ.ಪಿ. ಗುಂಡಣ್ಣವರ, ಬೇಸಾಯಶಾಸ್ತ್ರ ತಜ್ಞ ಡಾ| ಶಿವಮೂರ್ತಿ ಡಿ. ಸೇರಿದಂತೆ ಬರದೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next