Advertisement

ಸರ್ಕಾರದ ಕಾರ್ಯವೈಖರಿಗೆ ಹೈ ತರಾಟೆ

10:19 AM Nov 11, 2021 | Team Udayavani |

ಬೆಂಗಳೂರು: ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು “ಗೋಲ್ಡನ್‌ ಅವರ್‌’ ಅವಧಿಯಲ್ಲಿ ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು “ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಹೊಸದಾಗಿ ಟೆಂಡರ್‌ ಕರೆಯಲು ವಿಳಂಬ ಮಾಡುತ್ತಿರುವುದಕ್ಕೆ ಸರ್ಕಾರವನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿ ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾ ಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

Advertisement

ಆಗ “ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಹೊಸದಾಗಿ ಟೆಂಡರ್‌ ಕರೆಯಲು ಅನುಮೋದನೆ ನೀಡುವುದಕ್ಕೆ ರಾಜ್ಯ ಸಚಿವ ಸಂಪುಟ ವಿಳಂಬ ಮಾಡಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಸರ್ಕಾರದ ಕಾರ್ಯವೈಖರಿ ಬೇಸರ ತರುಸುತ್ತಿದೆ. ಸರ್ಕಾರದ ವ್ಯವಹಾರಗಳು ಹೇಗೆ ನಡೆಯುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ.

ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಸರ್ಕಾರದ ಕಾರ್ಯ ವೈಖರಿ ಹೀಗಿರುವುದಕ್ಕೆಯೇ ನ್ಯಾಯಾಲಯಕ್ಕೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬರುತ್ತಿವೆ. ಸರ್ಕಾರ ತಾನು ಮಾಡಬೇಕಾದ ಕೆಲಸವನ್ನೂ ತಾನಾಗಿಯೂ ಮಾಡುತ್ತಿಲ್ಲ. ಕೋರ್ಟ್‌ ನಿರ್ದೇಶನ ನೀಡಿದರೂ ಪಾಲಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿತು. ಇದಕ್ಕೂ ಮೊದಲು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್‌ ದಳವಾಯಿ, “ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಮೊದಲು ಕರೆದಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್‌ ಅನ್ನು ಸರ್ಕಾರ ರದ್ದುಪಡಿಸಿ ಆದೇಶಿಸಿತ್ತು.

ಇದನ್ನೂ ಓದಿ:- ಭಾರತೀಯ ಬ್ರಾಂಡ್‍ ಲಾವಾದಿಂದ ಮೊದಲ 5ಜಿ ಸ್ಮಾರ್ಟ್ ಫೋನ್‍ ಬಿಡುಗಡೆ : ಬೆಲೆ ಎಷ್ಟು ಗೊತ್ತಾ?

ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆ ಆದೇಶ ಹಿಂಪಡೆದಿದ್ದ ಸರ್ಕಾರ ಹೊಸದಾಗಿ ಟೆಂಡರ್‌ ಕರೆಯುವುದಾಗಿ ಹೇಳಿತ್ತು. ಈವರೆಗೂ ಟೆಂಡರ್‌ ಕರೆದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಟೆಂಡರ್‌ ಕರೆಯಲು ಅನುಮತಿ ನೀಡುವ ವಿಚಾರವನ್ನು ಸಚಿವ ಸಂಪುಟದ ಮುಂದಿದೆ.

Advertisement

ಎರಡು ವಾರ ಕಾಲಾವಕಾಶ ನೀಡಿದರೆ ಸಚಿವ ಸಂಪುಟದ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಅದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ಸಚಿವ ಸಂಪುಟದ ಅನುಮತಿ ಪಡೆಯಲು ಹೈಕೋರ್ಟ್‌ 2021ರ ಆ.31ರಂದು ಕಾಲಾವಕಾಶ ನೀಡಿತ್ತು. ಎರಡು ತಿಂಗಳೂ ಕಳೆದರೂ ಏನೂ ಆಗಿಲ್ಲ. ಈಗ ಮತ್ತೇ ಸರ್ಕಾರ ಕಾಲಾವಕಾಶ ಕೇಳುತ್ತಿದೆ. ಸರ್ಕಾರದ ಈ ಧೋರಣೆ ಒಪ್ಪುವಂತಹದ್ದಲ್ಲ ಎಂದು ಹೇಳಿತು. ಕೊನೆಗೆ ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ಈ ವಿಚಾರವನ್ನು ತ್ವರಿತವಾಗಿ ಪರಿಗಣಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

 ಅಧಿಕಾರಿಗಳ ಖುದ್ದು ಹಾಜರಾತಿ: ಸರ್ಕಾರ ಸುತ್ತೋಲೆ

 ಬೆಂಗಳೂರು: ಹೈಕೋರ್ಟ್‌ನಲ್ಲಿನ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಉಪಸ್ಥಿತಿ ಮತ್ತು ಖುದ್ದು ಹಾಜರಾತಿಗೆ ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್‌)ಗೆ ಮೂಲಸೌಕರ್ಯಗಳನ್ನು ಒದಗಿಸುವ ಹಾಗೂ ನಿರ್ವಸಿತರಿಗೆ ವಸತಿ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೈರು ಹಾಜರಾಗಿ ದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌, ಈ ವಿಚಾರವಾಗಿ ಸುತ್ತೋಲೆ ಹೊರಡಿಸುವಂತೆ ಸೋಮವಾರ ತಾಕೀತು ಮಾಡಿತ್ತು.

ಅದರಂತೆ, ಬುಧವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಅಡ್ವೋ ಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ,, ಹೈಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿ ದಾಗ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ನಡವಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಎಲ್ಲಾ ಇಲಾಖಾ ಮುಖಸ್ಥರಿಗೆ ನಿರ್ದೇಶನ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ನ.9ರಂದು ಸುತ್ತೋಲೆ ಹೊರಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೋರ್ಟ್‌ ವಿಚಾರದಲ್ಲಿ ಅಧಿ ಕಾರಿ ಗಳು ಗಂಭೀರವಾಗಿ ನಡೆದುಕೊಳ್ಳುವಂತೆ ನೋಡಿ ಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಅಧಿಕಾರಿಗಳ ಉಪಸ್ಥಿತಿ ಬಯಸಿದಾಗ ಅಂತಹ ಅಧಿಕಾರಿಗಳು ತಪ್ಪದೇ ಖುದ್ದಾಗಿ ಮತ್ತು ಆದ್ಯತೆ ಮೇರೆಗೆ ಹಾಜರಾಗಬೇಕು. ಒಂದೊಮ್ಮೆ ಅನಾರೋಗ್ಯವೂ ಸೇರಿದಂತೆ ತುರ್ತು ಕಾರಣಗಳಿದ್ದು, ವಿಚಾರಣೆಗೆ ಹಾಜರಾಗುವುದು ಸಾಧ್ಯವಾಗದಿದ್ದರೆ ಈ ವಿಚಾರವನ್ನು ಮುಂಚಿತವಾಗಿ ಸರ್ಕಾರಿ ವಕೀಲರಿಗೆ ತಿಳಿಸಬೇಕು. ಅಧಿಕಾರಿಗಳು ಈ ನಿರ್ದೇಶವನ್ನು ಪಾಲಿಸದಿದ್ದರೆ ಅಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next