Advertisement

ದಿಲ್ಲಿ ರೈಲು ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

03:45 AM Feb 20, 2017 | Team Udayavani |

ಹೊಸದಿಲ್ಲಿ: ಎಲ್ಲವೂ ಎಣಿಸಿದಂತೆ ನಡೆದರೆ ದಿಲ್ಲಿ ರೈಲು ನಿಲ್ದಾಣ ಶೀಘ್ರವೇ ವಿಶ್ವದರ್ಜೆಯ ರೂಪ ಪಡೆಯಲಿದೆ. ಕೇಂದ್ರ ಸರಕಾರವು ರೈಲು ನಿಲ್ದಾಣಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಆದಾಯ ಸಂಗ್ರಹಿಸಲು ನಿರ್ಧರಿಸಿದ್ದು, ಅದರಂತೆ ಯೋಜನೆ ರೂಪಿಸಲಾಗಿದೆ. ದಿಲ್ಲಿ ರೈಲು ನಿಲ್ದಾಣವನ್ನು ಪುನರ್‌ನಿರ್ಮಿಸುವ ಯೋಜನೆಯ ನೀಲನಕಾಶೆಯನ್ನು ದಕ್ಷಿಣ ಕೊರಿಯಾ ತಯಾರಿಸಿದ್ದು, ಇದಕ್ಕೆ ಅಂತಿಮ ಒಪ್ಪಿಗೆ ದೊರೆಯಬೇಕಿದೆ.

Advertisement

10,000 ಕೋ. ರೂ. ಯೋಜನೆ 
ಒಟ್ಟು 10,000 ಕೋಟಿ ರೂ. ಯೋಜನೆ ಇದಾಗಿದೆ. ಎಸ್ಕಲೇಟರ್‌, ಎಲಿವೇಟರ್‌, ಅಟೋಮ್ಯಾಟಿಕ್‌ ಟಿಕೆಟ್‌ ಕೌಂಟರ್‌, ವಿಮಾನ ನಿಲ್ದಾಣ ಮಾದರಿ ಎಕ್ಸಿಕ್ಯೂಟಿವ್‌ ಲಾಂಜ್‌. ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ. ಎಲ್ಲದಕ್ಕೂ ಡಿಜಿಟಲ್‌ ಸ್ಪರ್ಶ.

ಈ ರೈಲು ನಿಲ್ದಾಣದಲ್ಲಿ
ಏನೇನಿರಲಿದೆ?

ಅತ್ಯಾಕರ್ಷಕವಾಗಿ ನಿರ್ಮಾಣ ವಾಗಲಿರುವ ಅತ್ಯಾಧುನಿಕ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ಮೂರು ಗಗನಚುಂಬಿ ಕಟ್ಟಡಗಳು ಇರಲಿವೆ. ಇದರಲ್ಲಿ ಶಾಪಿಂಗ್‌ ಮಾಲ್‌ಗ‌ಳು, ಕಚೇರಿಗಳು ಇರಲಿವೆ. ರೈಲಿಗಾಗಿ ಕಾಯುವವರಿಗಾಗಿ ಪ್ರತ್ಯೇಕ ಸ್ಥಳಾವಕಾಶ.

ದಿಲ್ಲಿ ನಿಲ್ದಾಣಕ್ಕೆ ನಿತ್ಯ
5 ಲಕ್ಷ ಮಂದಿ ಭೇಟಿ

ದೇಶದ ಅತೀ ನಿಬಿಡ ನಿಲ್ದಾಣಗಳಲ್ಲಿ ದಿಲ್ಲಿಯೂ ಒಂದು. ನಿತ್ಯವೂ ಪ್ರಯಾಣ ಮತ್ತು ತತ್ಸಂಬಂಧಿ ಕಾರ್ಯಕ್ಕಾಗಿ ಸುಮಾರು 5 ಲಕ್ಷ ಮಂದಿ ಈ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ದೇಶದ ವಿವಿ ಧೆಡೆ ಸಂಪರ್ಕ ಕಲ್ಪಿಸುವ ಇಲ್ಲಿಗೆ 361 ರೈಲುಗಳು ಬಂದು ಹೋಗುತ್ತವೆ.

400 ನಿಲ್ದಾಣ
ದೇಶದ 400 ರೈಲು ನಿಲ್ದಾಣಗಳನ್ನು ವಾಣಿಜ್ಯ ಸಂಕೀರ್ಣಗಳಾಗಿ ಅಭಿವೃದ್ಧಿಪಡಿಸಿ ಈ ಮೂಲಕ ರೈಲ್ವೇಗೆ ವರಮಾನ ತಂದುಕೊಡಲು ರೈಲ್ವೇ ಸಚಿವ ಸುರೇಶ್‌ ಪ್ರಭು ಯೋಜನೆ ರೂಪಿಸಿದ್ದಾರೆ. ಇದರಲ್ಲಿ ದಿಲ್ಲಿ ರೈಲು ನಿಲ್ದಾಣವನ್ನು ಕಲಾತ್ಮಕವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ಕೊರಿಯಾ  ರೈಲ್ವೇ ಮುಂದೆ ಬಂದಿದೆ. ಮೊದಲ ಹಂತದಲ್ಲಿ 23 ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next