ಕಾರ್ಕಳ: ರುದ್ರಭೂಮಿಯನ್ನು ವ್ಯವಸ್ಥಿತ ವಾಗಿ ಇರಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ಕರಿಯಕಲ್ಲು ರುದ್ರಭೂಮಿಯನ್ನು ಗಮನೀಯ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪರಿಸರಕ್ಕೆ ಪೂರಕವಾಗಿ ಆಧುನಿಕ ಶೈಲಿಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.
24 ತಾಸು ಶವ ಸಂಸ್ಕಾರಕ್ಕೆ ನಡೆಸಲು ಅವಕಾಶವಿದೆ. ಕೋವಿಡ್-19 ಶವ ಸಂಸ್ಕಾರಕ್ಕೆ ದೊರೆತ ತಾಲೂಕಿನ ಏಕೈಕ ಶ್ಮಶಾನ ಕೂಡ ಇದಾಗಿದೆ. ಪುರಸಭೆ ವ್ಯಾಪ್ತಿ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಾದ ಮಿಯ್ನಾರು, ತೆಳ್ಳಾರು, ದುರ್ಗ, ನಿಟ್ಟೆ, ಸಾಣೂರು ಮುಂತಾದ ಕಡೆಗಳಿಂದಲೂ ಶವ ಸಂಸ್ಕಾರಕ್ಕಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.
ಇಂಟರ್‌ಲಾಕ್ ವ್ಯವಸ್ಥೆ ಅಳವಡಿಸಲಾಗಿದೆ. ಸುತ್ತಲೂ ತುಳಸಿ ಗಿಡ, ಹೂವಿನ ಗಿಡ ಹಾಗೂ ಫಲಭರಿತ ವೃಕ್ಷಗಳನ್ನು ಬೆಳೆಸುವಲ್ಲಿ ಪ್ರೋತ್ಸಾಹ ನೀಡಲಾಗಿದೆ. ಆಸನ ವ್ಯವಸ್ಥೆಗಾಗಿ ಕಲ್ಲಿನ ಬೆಂಚು ನಿರ್ಮಿಸಲಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಸುಣ್ಣ ಬಣ್ಣ ಬಳಿದು ಆಧುನಿಕ ಸ್ಪರ್ಶ ನೀಡಲಾಗಿದೆ.
ಶವ ಸಂಸ್ಕಾರದ ಜಾಗಕ್ಕೆ ಶೀಟ್ ಹಾಕಲಾಗಿದೆ. ಕಟ್ಟಿಗೆ ಹಾಕಲು ಪ್ರತ್ಯೇಕ ವ್ಯವಸ್ಥೆ, ಜನತೆಗೆ ತಂಗುವ ಕೊಠಡಿ, ಸೋಲಾರ್ ಮತ್ತು ವಿದ್ಯುತ್ ದೀಪ, ದಹನದ ಬೂದಿ ಹಾಕಲು ಪ್ರತ್ಯೇಕ ಪಿಟ್ ವ್ಯವಸ್ಥೆಗಳು ಇಲ್ಲಿವೆ.
ರುದ್ರಭೂಮಿ ಮೇಲ್ವಿಚಾರಣೆ ಸಮಿತಿ ಅಸ್ತಿತ್ವದಲ್ಲಿದೆ. ಪುರಸಭೆ ಮಾಜಿ ಸದಸ್ಯರೋರ್ವರು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶವ ಸಂಸ್ಕಾರಕ್ಕೆ ಆಗಮಿಸುವ ಜನತೆಯನ್ನು ಮನೆಗೆ ತಲುಪಿಸುವಲ್ಲಿ ವಾಹನ ವ್ಯವಸ್ಥೆಯನ್ನು ಕೂಡ ಇಲ್ಲಿ ಕಲ್ಪಿಲಾಗುತ್ತಿದೆ.
ಸೂಕ್ತ ವ್ಯವಸ್ಥೆ
ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪುರಸಭೆ ಹಾಗೂ ದಾನಿಗಳ ಸಹಕಾರದಿಂದ ಒಂದಷ್ಟು ವ್ಯವಸ್ಥೆಗಳನ್ನು ಮಾಡಿದ್ದೇವೆ. ಕೋವಿಡ್-19ನಲ್ಲಿ ಮೃತಪಟ್ಟರೆ ಶವ ಸಂಸ್ಕಾರಕ್ಕಾಗಿ ಈ ಶ್ಮಶಾನದಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇನ್ನಷ್ಟು ಸೌಕರ್ಯ ಕಲ್ಪಿಸಿ ಜನರಿಗೆ ಉಪಯುಕ್ತವಾಗುವಂತೆ ನಿರ್ಮಾಣ ಮಾಡಲಾಗುವುದು.
-ಪ್ರಕಾಶ್ ರಾವ್, ಮಾಜಿ ಸದಸ್ಯರು ಪುರಸಭೆ