ಬಾಗೇಪಲ್ಲಿ: ತಾಲೂಕಿನ ಗೂಳೂರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗದವರು ಸಾವಿರಾರು ರೂ.ಖರ್ಚು ಮಾಡಿ ಹೈಟೆಕ್ ಸ್ಪರ್ಶ ನೀಡಿದ್ದು, ಮತ್ತಷ್ಟು ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಮುಂದಾಗಿದ್ದಾರೆ.
ತೆಲುಗು ಪ್ರಭಾವ: ತಾಲೂಕಿನ ಗೂಳೂರು ಹೋಬಳಿ ಹೆಸರಿಗೆ ಮಾತ್ರವಷ್ಟೇ ಕರ್ನಾಟಕ ರಾಜ್ಯಕ್ಕೆ ಸೇರಿದ್ದು, ಈ ಭಾಗದ ಜನರು ಸರ್ಕಾರಿ ಕಚೇರಿ ಕೆಲಸಗಳು ಹೊರತುಪಡಿಸಿ ಉಳಿದಂತಹ ಎಲ್ಲಾ ರೀತಿಯ ವ್ಯವಹಾರಗಳು ತೆಲುಗು ಭಾಷೆಯಲ್ಲೇ ವ್ಯವರಿಸುತ್ತಾರೆ. ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಖರ ನಾಡು ಭಾಷೆ ತೆಲುಗು ಆಗಿದೆ.
ದಾಖಲಾತಿ ಕೊರತೆ: ತೆಲುಗು ಪ್ರಭಾವ ಹೆಚ್ಚು ಇರುವ ಈ ಭಾಗದಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳ ವ್ಯಾಮೋಹ ಹಾಗೂ ಪ್ರಭಾವ ಹೆಚ್ಚಿದ್ದು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆಕಡಿಮೆ ಆಗುತ್ತಿವೆ. ಕನ್ನಡ ಭಾಷೆಯ ಉಳುವಿಗಾಗಿ ಹಾಗೂ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಿ ಕನ್ನಡೀಕರಣಗೊಳಿಸ ಬೇಕೆಂದು ಒತ್ತಾಯಿಸಿ ಈ ಭಾಗದ ಕನ್ನಡಾಭಿಮಾನಿಗಳು ನಿತ್ಯ ಹೋರಾಟ ಮಾಡುತ್ತಿರುವುದು ಮುಂದುವರಿಯುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗದ ಕಾರ್ಯಕ್ರಮದಿಂದಕನ್ನಡಾಭಿಮಾನಿಗಳಿಗೆ ಶಕ್ತಿ ತುಂಬಿದಂತಾಗಿದೆ.
ಆಕರ್ಷಣೆ: ತಾಲೂಕಿನ ಗೂಳೂರು ಗ್ರಾಮದ ಬಾಬಾಜಾನ್ ಎಂಬುವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದೊಂದಿಗೆ ಹಲವು ದಶಕಗಳಿಂದ ನಂಬಿಕಸ್ಥನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮಗ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರರ ಆಪ್ತರು ಆಗಿದ್ದು, ತಮ್ಮ ನಾಯಕನ ಹುಟ್ಟು ಹಬ್ಬದ ನೆನಪಿಗಾಗಿ ಬಾಬಾಜಾನ್, ಸ್ವಗ್ರಾಮ ಹಾಗೂ ತಾನು ವ್ಯಾಸಂಗ ಮಾಡಿರುವ ಗೂಳೂರು ಸರ್ಕಾರಿ ಶಾಲೆಯಲ್ಲಿ ಮಿನಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ, ಶಾಲೆಯ ಗೋಡೆಗಳಿಗೆ ಶಿಕ್ಷಣ, ಸಾಹಿತ್ಯ, ಜ್ಞಾನಕ್ಕೆ ಪೂರಕವಾದ ಬರಹ ಮತ್ತು ಚಿತ್ರಕಲೆ ಸೇರಿದಂತೆ ಕ್ರೀಡೆಗೆ ಅಗತ್ಯವಿರುವ ಮಾಹಿತಿಯನ್ನು ಗೋಡೆಗಳ ಮೇಲೆ ಬಿಡಿಸಲಾಗಿದ್ದು, ವರ್ಣರಂಜಿತ ಬಣ್ಣ ಹಾಕಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಪ್ರೋತ್ಸಾಹ ನೀಡಿದ್ದಾರೆ.
ಮತ್ತಷ್ಟು ಶಾಲೆಗಳ ಅಭಿವೃದ್ಧಿಗೆ ಯೋಜನೆ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗದಿಂದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ಮೊದಲ ಹಂತದ ಭಾಗವಾಗಿ 75 ಸಾವಿರ ರೂ. ವೆಚ್ಚದಲ್ಲಿ ಗೂಳೂರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದು ಎಂದು ಕರ್ನಾಟಕ ರಾಜ್ಯ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ಪದಾಧಿಕಾರಿ ಗೂಳೂರು ಬಾಬಾಜಾನ್ ತಿಳಿಸಿದರು. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ತಾಲೂಕಿನ ಗಡಿ ಗ್ರಾಮಗಳಲ್ಲಿರುವ ಮತ್ತಷ್ಟು ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಾದರಿ ಶಾಲೆಗಳನ್ನಾಗಿ ಪರಿವರ್ತನೆ ಮಾಡು ತ್ತಿರುವುದು ಸ್ವಾಗತಾರ್ಹ.ಶಾಲೆಯಲ್ಲಿ ಇನ್ನಷ್ಟು ಸಮಸ್ಯೆಗಳಿದ್ದು, ಸಮಾಜ ಸೇವಕರು,ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾದರೆ ಶಾಲೆಯ ಅಭಿವೃದ್ಧಿಯ ಜೊತೆಗೆ ಮಕ್ಕಳ ದಾಖಲಾತಿಹೆಚ್ಚಳಕ್ಕೆ ಅನುಕೂಲವಾಗಲಿದೆ.
–ಸುಬ್ರಹ್ಮಣ್ಯ, ಮುಖ್ಯ ಶಿಕ್ಷಕ, ಗೂಳೂರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆ
–ಪಿ.ಮಂಜುನಾಥರೆಡ್ಡಿ, ಬಾಗೇಪಲ್ಲಿ