ಭರಮಸಾಗರ: ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಾಣವಾಗಿ ಹತ್ತು ವರ್ಷ ಕಳೆದಿವೆ. ಆದರೆ ನಿಲ್ದಾಣದ ಒಳಗೆ ಬಂದು ಹೋಗಬೇಕಾದ ಬಸ್‌ಗಳು ಬಾರದೇ ಹೊರಗಿನಿಂದಲೇ ಹೋಗುವುದರಿಂದ ನಿಲ್ದಾಣ ಇದ್ದೂ ಇಲ್ಲದಂತಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಕೋಟ್ಯಂತರ ರೂ. ವ್ಯಯಿಸಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಒಳ ಆವರಣದಲ್ಲಿ ಬಸ್‌ಗಳು ಬಂದು ನಿಲ್ಲಲು ಪ್ರತ್ಯೇಕ ಕಂಪರ್ಟ್‌ಗಳಿವೆ. ಪ್ರಯಾಣಿಕರು ಕುಳಿತುಕೊಳ್ಳಲು ಆಸನ, ಶೌಚಾಲಯ ವ್ಯವಸ್ಥೆ ಇದೆ. ಬಾಗಿಲು ತೆರೆಯದೇ ಇರುವ ಮೂರು ವಾಣಿಜ್ಯ ಮಳಿಗೆಗಳಿವೆ. ಪ್ರತ್ಯೇಕ ಸಂಚಾರಿ ನಿಯಂತ್ರಕರ ಕೊಠಡಿ, ಹೈಮಾಸ್ಟ್ ದೀಪ ಸೇರಿದಂತೆ ಹೈಟೆಕ್ ನಿಲ್ದಾಣವಿದು. ಆದರೆ ವಾಸ್ತವದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳೇ ಒಳಗೆ ಬಾರದೆ ನಿಲ್ದಾಣದ ಮುಂಭಾಗದಲ್ಲೇ ನಿಲುಗಡೆ ಮಾಡುತ್ತಿವೆ. ಕೆಲವು ಬಸ್‌ಗಳು ಗ್ರಾಮಕ್ಕೂ ಬಾರದೆ ಬೈಪಾಸ್ ಮೂಲಕವೇ ಸಾಗುತ್ತವೆ. ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿ ಹೋಗಲಾಗುತ್ತಿದೆ.
ಉತ್ತರಕರ್ನಾಟಕದ ಕಡೆ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳು, ದಾವಣಗೆರೆ, ಚಿತ್ರದುರ್ಗ ಡಿಪೋ ಬಸ್ ಗಳು, ಬೆಂಗಳೂರು, ಹೊರ ರಾಜ್ಯದ ಕಡೆ ತೆರಳುವ ಬಸ್‌ಗಳು ಸೇರಿದಂತೆ ಈ ಮಾರ್ಗದಲ್ಲಿ 350ಕ್ಕೂ ಹೆಚ್ಚು ಬಸ್‌ಗಳು ಬೈಪಾಸ್‌ನಿಂದ ಗ್ರಾಮದ ಒಳಗಿನ ನಿಲ್ದಾಣಕ್ಕೆ ಬಂದು ಟಿಸಿ ಬಳಿ ನೋಂದಣಿ ಮಾಡಿಕೊಂಡು ಹೋಗಬೇಕು ಎಂಬ ನಿಯಮವಿದೆ. ಆದರೆ ಬೆರಳಿಣಿಕೆ ಬಸ್‌ಗಳು ಟಿಸಿ ಇದ್ದಾಗ ಮಾತ್ರ ಒಳ ಬಂದು ಹೋಗುತ್ತವೆ. ಸಂಜೆ ಬಳಿಕ ಯಾವ ಬಸ್‌ಗಳು ಕೂಡ ನಿಲ್ದಾಣಕ್ಕೆ ಹೋಗುವುದೇ ಇಲ್ಲ. ಹಲವು ಕೆಎಸ್‌ಆರ್ ಟಿಸಿ ಬಸ್‌ಗಳು ಗ್ರಾಮದ ಒಳಗೂ ಬಾರದೆ ಬೈಪಾಸ್ ಮೂಲಕವೇ ಸಾಗಿ ಬಿಡುತ್ತವೆ.
ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಸಗಿ ಬಸ್ ನಿಲ್ದಾಣದ ಬಳಿಯೇ ನಿಲುಗಡೆ ಮಾಡುತ್ತವೆ. ಹಗಲು ಪಾಳಿಗೆ ಮಾತ್ರ ಟಿಸಿ ನೇಮಕ ಮಾಡಲಾಗಿದೆ. ಅವರುವಾರದ ರಜೆ ಮೇಲೆ ತೆರಳಿದರೆ ಅಂದು ನಿಲ್ದಾಣದ ಬೀಗ ತೆಗೆಯುವವರೂ ಇರೋದಿಲ್ಲ. ಸಾರ್ವಜನಿಕರು ಬಸ್‌ಗಳು ಒಳಗೆ ಬಾರದೆ ಇರುವದನ್ನು ಪ್ರಶ್ನಿಸಿದರೆ ಸ್ವತಃ ಟಿಸಿ ರಸ್ತೆಗೆ ಬಂದು ಬಸ್‌ಗಳನ್ನು ಬಲವಂತವಾಗಿ ಒಳ ಕರೆದುಕೊಂಡು ಹೋಗಿರುವ ಉದಾಹರಣೆಗಳಿವೆ. ಇಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ಖಾನಾವಳಿಯೊಂದು ಆರಂಭವಾಗಿರುವುದನ್ನು ಬಿಟ್ಟರೆ ಉಳಿದ ಮೂರು ಮಳಿಗೆಗಳು ಇದುವರೆಗೆ ಬಾಗಿಲನ್ನೇ ತೆರೆದಿಲ್ಲ. ಸಂಜೆಯಾದರೆ ವಾಕಿಂಗ್ ಮಾಡುವವರ ಮತ್ತು ಹರಟೆ ಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಲೈಟ್‌ಗಳಿಗೆ ಕಲ್ಲು ಹೊಡೆದಿದ್ದಾರೆ. ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಬೀಡಾ, ಜರ್ದಾ ಅಗಿದು ಉಗಿದಿದ್ದಾರೆ. ಆವರಣದ ಒಳಗಿನ ರಸ್ತೆಗೆ ಹಾಕಲಾದ ಡಾಂಬರ್ ಕಿತ್ತು ಹೋಗಿ ಜಲ್ಲಿ ಕಲ್ಲುಗಳು ಹರಡಿವೆ. ಕಿಟಕಿ ಗಾಜುಗಳು ಒಡೆದಿವೆ. ಇನ್ನು ಮುಂದಾದರೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಸಾರಿಗೆ ಇಲಾಖೆಯವರು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.