ಕೆಂಗೇರಿ: ಕೆಂಗೇರಿ ಉಪನಗರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೆಡವಿ ಅಲ್ಲಿ 7.5ಕೋಟಿರೂ ವೆಚ್ಚದಲ್ಲಿ ಹೈಟೆಕ್ ಸರಕಾರಿ ಆಸ್ಪತ್ರೆ ನಿರ್ಮಾಣವನ್ನು ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಅವರು ಇಲ್ಲಿನ ಇಂದಿರಾ ಪ್ರಿಯದರ್ಶಿನಿ ರಸ್ತೆಯಲ್ಲಿ 70ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿ, ಕೆಲ ತಾಂತ್ರಿಕ ಸಮಸ್ಯೆಯಿದ್ದು ಅದನ್ನು ಸರಿಪಡಿಸಿ ಕಾಮಗಾರಿಗೆ ಚಾಲನೆಯನ್ನು ನೀಡಲಾಗುವುದು ಅದಕ್ಕೆ ಅನುದಾನವನ್ನು ಈಗಾಗಲೇ ಬಿಡುಗಡೆಯನ್ನು ಮಾಡಲಾಗಿದೆ ಎಂದರು.
ಅದೇ ರೀತಿ ನಾಗರಿಕರ ಬಹು ವರ್ಷಗಳ ಬೇಡಿಕೆಯಾದ ಉಪನಗರದಿಂದ ಮೈಸೂರು ರಸ್ತೆ ಮಧ್ಯೆ ಆರ್‌ವಿ ಕಾಲೇಜು ಬಳಿ ರೈಲ್ವೇ ಅಂಡರ್ ಪಾಸ್ ನಿರ್ಮಾಣಕ್ಕೆ ಸರಕಾರದಿಂದ ಬಿಬಿಎಂಪಿಗೆ ಹಣವನ್ನು ವರ್ಗಾಯಿಸಿದ್ದು ಅದಕ್ಕೆ ಟೆಂಡರ್ ಕರೆದು ಕಾಮಾಗಾರಿಯನ್ನು ಅದಷ್ಟು ಬೇಗ ಆರಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದಕ್ಕೂ ಮುಂಚೆ ಡಾ,ಶಿವಕುಮಾರ್ ಸ್ವಾಮಿಜಿಯವರ ಗೌರವಾರ್ಥ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು.
ಕೆಪಿಸಿಸಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯೆ ರೋಹಿಣಿ ಸುರೇಶ್, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್,ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪ್ರಭು ಇತರರಿದ್ದರು.