ಭಟ್ಕಳ: ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗಿದ್ದು, ಮುಂದಿನ ತಿಂಗಳು ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಭಟ್ಕಳ ಪಟ್ಟಣದ ಬಸ್ ನಿಲ್ದಾಣಕ್ಕೆ 2017-18ನೇ ಸಾಲಿನಲ್ಲಿ ಐದು ಕೋಟಿರೂ. ಮಂಜೂರಿಯಾಗಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಶಂಕು ಸ್ಥಾಪನೆ ನೆರವೇರಿಸಿದ್ದರು. ಬೆಳಗಾವಿಯ ಪ್ರೌಡ್ ಇಂಡಿಯಾ ಪ್ರಮೋಟರ್ ಗುತ್ತಿಗೆದಾರ ಕಂಪೆನಿಗೆಕಾಮಗಾರಿ ಟೆಂಡರ್ ಆಗಿದ್ದು, ಕಾಮಗಾರಿಆರಂಭಿಸಿದ ನಂತರ ಒಂದೊಂದೇ ತೊಂದರೆಗಳು ಬಂದಿದ್ದರಿಂದ ಕಟ್ಟಡ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಎನ್ನಲಾಗಿದೆ. ಮೊದಲು ಡೀಸೆಲ್ ಬಂಕ್‌ನ್ನು ಪೆಟ್ರೋಲಿಯಂ ಕಂಪೆನಿ ಸ್ಥಳಾಂತರಿಸಲು ತಡ ಮಾಡಿದ್ದರೆ, ನಂತರ ಕೋವಿಡ್ ಒಕ್ಕರಿಸಿದ್ದರಿಂದ ಕಾಮಗಾರಿಯೇ ನಿಂತು ಹೋಗಿ ವಿಳಂಬವಾಯಿತೆನ್ನಲಾಗಿದೆ.
ಈಗ ಸಂಪೂರ್ಣ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದರೂ ಚುನಾವಣಾ ನೀತಿ ಸಂಹಿತೆ ಅಡ್ಡ ಬಂದಿದೆ. ಈ ಹಿಂದೆ ಹಳೇ ಬಸ್ ನಿಲ್ದಾಣದಲ್ಲಿ ಜಾಗಾ ಇಕ್ಕಟ್ಟಾಗಿರುವುದರಿಂದ ಅಂದಿನ ಸಚಿವ ಎಸ್.ಎಂ. ಯಾಹ್ಯಾರವರು ಹೊಸಬಸ್ ನಿಲ್ದಾಣ ಮಂಜೂರಿ ಮಾಡಿಸಿದ್ದರು. ಹಲವಾರು ವರ್ಷಗಳ ಕಾಲ ಜನತೆಗೆ ಉತ್ತಮ ಸೇವೆ ನೀಡಿದ್ದ ಬಸ್ ನಿಲ್ದಾಣ ಕುಸಿದು ಬಿದ್ದ ಪರಿಣಾಮ ಜನತೆಗೆ ನಿಲ್ಲಲೂ ಸ್ಥಳವಿಲ್ಲವಾಗಿತ್ತು. ಅಂದಿನ ಶಾಸಕ ಮಂಕಾಳ ವೈದ್ಯ ಅವರು ಬಸ್ ನಿಲ್ದಾಣಕ್ಕೆ 5 ಕೋಟಿ ರೂಪಾಯಿ ಮಂಜೂರಿ ಮಾಡಿಸಿದ್ದರು. ಭಟ್ಕಳ ಬಸ್ ಡಿಪೋ ಸಾಗರ ರಸ್ತೆಗೆ ವರ್ಗಾವಣೆಗೊಂಡಿದ್ದರಿಂದ ಬಸ್ ಡಿಪೋ ಇರುವ ಸ್ಥಳದಲ್ಲಿಯ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಇಂದು ಅತ್ಯಂತ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ.
ಬಸ್ ನಿಲ್ದಾಣದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಒಂದೇ ಬಾರಿಗೆ 12 ಬಸ್‌ಗಳು ನಿಲ್ಲಲು ವ್ಯವಸ್ಥೆಯಿದೆ. ನೆಲ ಮಾಳಿಗೆಯಲ್ಲಿ ಪ್ರತ್ಯೇಕವಾಗಿ ಮಹಿಳೆಯರ ವಿಶ್ರಾಂತಿ ಕೊಠಡಿ, ಪುರುಷರ ವಿಶ್ರಾಂತಿ ಕೊಠಡಿಯೊಂದಿಗೆ ಚಿಕ್ಕ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆಯೂ ಮಾಡಲಾಗಿದೆ. ಟಿಕೆಟ್ ಕಾಯ್ದಿರಿಸುವ ಕೊಠಡಿ, ನಿಯಂತ್ರಣ ಕೊಠಡಿಸೇರಿಂದಂತೆ ಒಟ್ಟೂ 12 ವಾಣಿಯ ಮಳಿಗೆಗಳಿವೆ. ಅಲ್ಲದೇ ಒಂದು ಹೈಟೆಕ್ ಕ್ಯಾಂಟೀನ್ ವ್ಯವಸ್ಥೆ ಇದ್ದು, ವಿಶಾಲವಾದ ಹಾಲ್, ಪ್ರತ್ಯೇಕವಾದ ಫ್ಯಾಮಿಲಿ ರೂಮ್ ಇತ್ಯಾದಿ ವ್ಯವಸ್ಥೆಯಿದೆ. ಪ್ರಥಮ ಮಾಳಿಗೆಯಲ್ಲಿ ಎರಡು ಹಾಲ್ ಹಾಗೂ ವಾಣಿಜ್ಯ ಮಳಿಗೆಗಳಿದ್ದು, ಈಗಾಗಲೇ ಈ ಟೆಂಡರ್ ಮೂಲಕ ಹಲವರು ಅಂಗಡಿ ಮಳಿಗೆಗಳನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವು ಖಾಲಿಯಾಗಿವೆ ಎನ್ನಲಾಗಿದೆ.
ಮಾಳಿಗೆಯಲ್ಲಿ ಮಾಲ್ ನಮೂನೆಯ ಬೃಹತ್ ಅಂಗಡಿ ಮಾಡಲುಅವಕಾಶವಿದ್ದು, ಬ್ಯಾಂಕ್ ಶಾಖೆ ಮಾಡಲೂ ಅನುಕೂಲವಿದೆ ಎನ್ನಲಾಗಿದೆ. ಭಟ್ಕಳದ ಹಳೇ ಬಸ್ ನಿಲ್ದಾಣದ ಜಾಗಾ ಕೂಡಾ ದೊಡ್ಡದಿದ್ದು, ಅದನ್ನು ಕೂಡಾ ಬಸ್ ನಿಲ್ದಾಣಕ್ಕೆ ಬಳಸಿಕೊಳ್ಳಲು ಯೋಚಿಸಲಾಗಿದ್ದರೂ ಹಣ ಮಂಜೂರಿಯಾಗಬೇಕಾಗಿದೆ.ಈಗಿರುವ ಬಸ್ ನಿಲ್ದಾಣದ ಜಾಗ ಪ್ರಸ್ತುತಖಾಲಿಯಾಗಿರಲಿದ್ದು, ಅಲ್ಲಿ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಪಾರ್ಕಿಂಗ್ ಜಾಗಾ ಮಾಡಿ ಟೆಂಡರ್ ಕರೆದರೆ ಇಲಾಖೆಗೂ ಆದಾಯ ಹಾಗೂ ವಾಹನ ನಿಲ್ಲಿಸಿ ಬೇರೆ ಊರಿಗೆ ಹೋಗುವವರಿಗೂ ಅನುಕೂಲವಾಗುವುದು. ಅಲ್ಲದೇ ಇಲಾಖೆಗೂ ಕೂಡಾ ಆದಾಯ ಬರುವುದು. ಮುಂದೆ ಬಸ್ ನಿಲ್ದಾಣಕ್ಕೆ ಅಗತ್ಯವಿರುವಷ್ಟು ಜಾಗಾವನ್ನು ಬಳಸಿಕೊಂಡು ಉಳಿದ ಜಾಗಾದಲ್ಲಿ ವಾಣಿಜ್ಯ ಸಂಕೀರ್ಣ ಮಾಡಿದರೆ ಅತ್ಯಂತ ಅನುಕೂಲವಾಗುವುದು.
ಭಟ್ಕಳ ಬಸ್ ನಿಲ್ದಾಣದ ಸಿವಿಲ್ ಕಾಮಗಾರಿಯು ಉತ್ತಮವಾಗಿ ಮುಕ್ತಾಯವಾಗಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆ ಮುಗಿದ ನಂತರ ಶಾಸಕರು, ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಉದ್ಘಾಟನಾ ದಿನಾಂಕ ನಿಗದಿಗೊಳಿಸಲಾಗುವುದು.
-ವಿವೇಕಾನಂದ ಹೆಗಡೆ, ಸಾರಿಗೆ ಜಿಲ್ಲಾಧಿಕಾರಿ, ಶಿರಸಿ