ಧಾರವಾಡ: ದೇಶದಲ್ಲಿ ಬದಲಾವಣೆ ಅತಿ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ರೈಲು, ಪ್ರವಾಸೋದ್ಯಮ, ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ವಿದ್ಯಾಗಿರಿಯ ಜೆಎಸ್ಸೆಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ನಾಗರಿಕರಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ನಿರೋದ್ಯೋಗ ಸಮಸ್ಯೆ ಬಗೆಹರಿಸಲಾಗುವುದು. ಪ್ರತಿಯೊಬ್ಬರಿಗೂ 2024ರೊಳಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಂಕಲ್ಪ ಮಾಡಲಾಗಿದೆ. 2022ರೊಳಗೆ ಬೆಂಗಳೂರಿನಿಂದ ಧಾರವಾಡಕ್ಕೆ 4 ಗಂಟೆಗಳಲ್ಲಿ ರೈಲು ಸಂಚರಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೋದಿ ಅವರ ಸಂಪುಟದಲ್ಲಿ ಮಂತ್ರಿ ಸ್ಥಾನ ಲಭಿಸಿರುವುದು ಜವಾಬ್ದಾರಿ ಹೆಚ್ಚಿಸಿದೆ. ಹೀಗಾಗಿ ಆದಷ್ಟು ಸನ್ಮಾನ ಸಮಾರಂಭಗಳನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ಜನರ ಅಪೇಕ್ಷೆಗೆ ತಕ್ಕಂತೆ ಸಮಾಜಮುಖೀಯಾಗಿ ಕಾರ್ಯಪ್ರವೃತ್ತನಾಗುತ್ತೇನೆ. ಯುಪಿಎ ಸರ್ಕಾರ 10 ವರ್ಷಗಳಲ್ಲಿ 13 ಲಕ್ಷ ಮನೆಗಳನ್ನು ನಿರ್ಮಿಸಿದರೆ ಮೋದಿ ಸರ್ಕಾರ 5 ವರ್ಷಗಳಲ್ಲಿ 26 ಲಕ್ಷ ಮನೆಗಳನ್ನು ನಿರ್ಮಿಸಿ ವಿತರಿಸಿದೆ. ಇದು ಮೋದಿ ಸರ್ಕಾರದ ಕೆಲಸಕ್ಕೆ ಹಿಡಿದ ಕೈಗನ್ನಡಿ ಎಂದರು.
ಆರೆಸ್ಸೆಸ್ ಉತ್ತರ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ ಮಾತನಾಡಿ, ಗುಲಾಮರ ದೇಶ ಎಂದು ಬಿಂಬಿತವಾಗುತ್ತಿದ್ದ ಭಾರತ ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಅಧಿಕಾರಕ್ಕಾಗಿ ಸಮಾಜ ಒಡೆಯುವ ಶಕ್ತಿಗಳು ನಮ್ಮ ಒಳಗೆ ಮತ್ತು ಹೊರಗೆ ಇವೆ. ಅವುಗಳ ನಾಶದಿಂದ ಜನರಲ್ಲಿ ಸಂಘಟಿತ ಭಾವ ಮೂಡಿದರೆ ಭಾರತ ವಿಶ್ವಗುರು ಆಗಲಿದೆ. ಅಧಿಕಾರದಲ್ಲಿರುವ ಸರ್ಕಾರ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಪ್ರೊ| ಎಂ.ಐ. ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಎಸ್.ಆರ್. ರಾಮಗೌಡರ, ಅರುಣ ಜೋಶಿ, ರೆವರೆಂಡ್ ಸಕ್ಕರಿ, ಕೆ.ಬಿ. ನಾವಲಗಿಮಠ, ಸುಭಾಷ ನಾಡಿಗೇರ, ಡಾ| ಆನಂದ ಪಾಂಡುರಂಗಿ ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಪ್ರೊ| ಕಿರಣ ಶಿಂಧೆ ಸ್ವಾಗತಿಸಿದರು.