ಮಹಾನಗರ, ಮೇ 12: ನಗರವನ್ನು ಕೋಟ್ಪಾ ಕಾಯಿದೆಯ ಉನ್ನತ ಅನುಷ್ಠಾನ ನಗರವನ್ನಾಗಿ ಘೋಷಿಸಲು ಸಿದ್ಧತೆ ನಡೆಯುತ್ತಿದೆ.
ಮೇ 31ರ ವಿಶ್ವ ತಂಬಾಕು ರಹಿತ ದಿನದ ಸಂದರ್ಭ ಮಂಗಳೂರು ಈ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕ ನಿರಂತರ ಕಾರ್ಯಾಚರಣೆಗೆ ನಡೆಸುತ್ತಿದ್ದು, ಕಾಯಿದೆಯ ಶೇ. 85ರಷ್ಟು ಅಂಶಗಳನ್ನು ಅನುಷ್ಠಾನಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ನಗರ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಕಾಲೇಜು ಆವರಣಗಳಲ್ಲಿ ಹದ್ದಿನ ಕಣ್ಣು:
2003ರಲ್ಲಿ ಜಾರಿಗೆ ಬಂದ ಸಿಗರೇಟ್, ಇತರೆ ತಂಬಾಕು ಉತ್ಪನ್ನಗಳ ಆ್ಯಕ್ಟ್ ಪ್ರಕಾರ ತಂಬಾಕು ಸೇವನೆ, ಮಾರಾಟದ ಕುರಿತಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆದರೆ ನಗರದ ಪ್ರಮುಖ ಕಾಲೇಜುಗಳ ಸಮೀಪ, ಇನ್ನಿತರ ಜಾಗಗಳಲ್ಲಿ ತಂಬಾಕು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಂಡ ಕಠಿನ ಕ್ರಮಗಳನ್ನು ಕೈಗೊಂಡಿದೆ.
Advertisement
ಈಗ ನಗರದಲ್ಲಿ ಶೇ.60ರಷ್ಟು ಕೋಟ್ಪಾ ಕಾಯಿದೆ ಅನುಷ್ಠಾನವಾಗಿದ್ದು, ಇದನ್ನು ಶೇ.85ಕ್ಕೆ ಹೆಚ್ಚಿಸಬೇಕಿದೆ. ಆಗ ಮಾತ್ರ ನಗರವನ್ನು ‘ಕೋಟ್ಪಾ ಕಾಯಿದೆಯ ಉನ್ನತ ಅನುಷ್ಠಾನ ನಗರ’ ಎಂದು ಘೋಷಿಸಬಹುದು.
Related Articles
Advertisement
ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ:
ಕಾಯ್ದೆಯ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರ ಮಂದಿರ, ಗೂಡಂಗಡಿಗಳು, ಸಾರ್ವಜಹನಿಕರು ಸೇರುವ ಸ್ಥಳಗಳಲ್ಲಿ ತಂಬಾಕು ಸೇವನೆ ಎಚ್ಚರಿಕೆ ಫಲಕವನ್ನು ಅಳವಡಿಸಬೇಕು. ಶಾಲಾ ಕಾಲೇಜುಗಳ 100 ಗಜ ದೂರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧ, 18 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನ ಮಾರಾಟವೂ ನಿಷಿದ್ಧ.
ಕಾಯಿದೆಯಲ್ಲಿರುವ ಈ ಅಂಶಗಳ ಪರಿಣಾಮಕಾರಿ ಅನುಷ್ಠಾನ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕದ ಮುಖ್ಯ ಉದ್ದೇಶ. ಇದಕ್ಕಾಗಿ ಕಾರ್ಯಾಚರಣೆ ಸಂದರ್ಭ ಕಾಯಿದೆಯನ್ನು ಉಲ್ಲಂಘಿಸಿದ್ದು ಕಂಡು ಬಂದರೆ ದಂಡ ಪ್ರಯೋಗದ ಜತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ತಂಡ ಮಾಡುತ್ತಿದೆ. ಎಲ್ಲೆಲ್ಲಿ ಫಲಕಗಳನ್ನು ಹಾಕಿಲ್ಲವೋ ಅಲ್ಲೆಲ್ಲ ಉಚಿತವಾಗಿ ಫಲಕವನ್ನು ವಿತರಿಸಿ ಅಳವಡಿಸುವ ಕೆಲಸವನ್ನೂ ತಂಡ ಮಾಡುತ್ತಿದೆ.
ಸಾರ್ವಜನಿಕರು ಸಹಕರಿಸಿ:
ನಗರವನ್ನು ಕೋಟ್ಪಾ ಕಾಯಿದೆಯ ಉನ್ನತ ಅನುಷ್ಠಾನ ನಗರವನ್ನಾಗಿ ಘೋಷಿಸಲು ಪ್ರಯತ್ನ ನಡೆಯುತ್ತಿದ್ದು, ಇದಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ. ಸಾರ್ವಜನಿಕರು ಕೂಡ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕು.– ಡಾ| ಪ್ರೀತಾ, ಸಲಹೆಗಾರರು, ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶ
•ವಿಶೇಷ ವರದಿ