Advertisement

ರಾ.ಹೆ.ಗೆ ಕೇವಲ ಹೈಮಾಸ್ಟ್‌ ದೀಪವಿದೆ,ಬೀದಿ ದೀಪವಿಲ್ಲ

06:00 AM Jul 07, 2018 | Team Udayavani |

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ವೇಳೆ ಸಂಚಾರವೆನ್ನುವುದು ಬಹಳ ದುಸ್ತರವಾಗಿದೆ. ಪ್ರಮುಖ ಬಸ್‌ ನಿಲ್ದಾಣ ಮತ್ತು ನಗರ ಪ್ರದೇಶಗಳಲ್ಲಿ  ಹೆದ್ದಾರಿ ನಿರ್ಮಾಣ ಸಂಸ್ಥೆ ಅಳವಡಿಸಿದ ಹೈಮಾಸ್ಟ್‌ ದೀಪಗಳನ್ನು ಹೊರತು ಪಡಿಸಿದರೆ ಎಲ್ಲಿಯೂ ಬೀದಿ ದೀಪದ ವ್ಯವಸ್ಥೆ ಇಲ್ಲ.

Advertisement

ಮಹಿಳೆಯರಿಗೆ ಅಪಾಯ
ಬೀದಿ ದೀಪ ಇಲ್ಲದೆ ಇರುವುದು ಮಹಿಳೆಯರ ಸುರಕ್ಷೆಗೆ ತೊಡಕಾಗಿದೆ. ಉಡುಪಿ, ಕುಂದಾಪುರ, ಮೊದಲಾದೆಡೆ ಕೆಲಸಕ್ಕೆ, ವಿದ್ಯಾಭ್ಯಾಸಕ್ಕೆಂದು ತೆರಳುವ ಹೆಣ್ಮಕ್ಕಳು ಕತ್ತಲಾಗುವ ಮುನ್ನ ಮನೆಗೆ ಬಂದು ಸೇರಬೇಕು. ಇಲ್ಲವಾದಲ್ಲಿ ಹೆತ್ತವರು ಸಂಜೆ ಕತ್ತಲಾದ ಮೇಲೆ ತಮ್ಮ ಹೆಣ್ಮಕ್ಕಳನ್ನು ಬಸ್‌ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಸ್ವಂತ ವಾಹನವಿದ್ದವರು ಬಸ್‌ ನಿಲ್ದಾಣದಿಂದ ವಾಹನಗಳ ಮೂಲಕ ಕರೆದುಕೊಂಡು ಬಂದರೆ; ಇನ್ನುಳಿದವರು ಕತ್ತಲಲ್ಲಿ ಬ್ಯಾಟರಿ ಹಿಡಿದುಕೊಂಡು ತೆರಳಬೇಕಾದ ಪರಿಸ್ಥಿತಿ ಇದೆ.

ಮಳೆಗಾಲದಲ್ಲಿ ಅಪಾಯ ಜಾಸ್ತಿ
ಮಳೆಗಾಲದಲ್ಲಿ  ಫ‌ುಟ್‌ಬಾತ್‌ನಲ್ಲಿ ನೀರು ತುಂಬಿಕೊಂಡು ನಡೆದಾಡಲು ಅಸಾಧ್ಯವಾದ ಸ್ಥಿತಿ ಇರುತ್ತದೆ. ಅದಕ್ಕಾಗಿ ಹೆಚ್ಚಿನ ಪಾದಚಾರಿಗಳು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುತ್ತಾರೆ. ಬೀದಿ ದೀಪಗಳಿದ್ದಲ್ಲಿ  ವಾಹನ ಸವಾರರಿಗೆ ದೂರದಿಂದಲೇ ವ್ಯಕ್ತಿಯ ಚಲನೆ ತಿಳಿಯುತ್ತದೆ.  ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಎಲ್ಲಿಯೂ ಬೀದಿ ಇಲ್ಲದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.

ಎಲ್ಲೆಲ್ಲಿ  ಬೀದಿ ದೀಪ ಇದೆ
ಕುಂದಾಪುರದಿಂದ ಉಡುಪಿಯವರೆಗೆ ಕೋಟೇಶ್ವರ ಅಂಡರ್‌ ಪಾಸ್‌, ಬೀಜಾಡಿ ಕ್ರಾಸ್‌, ಕುಂಭಾಶಿ ಬಸ್‌ ನಿಲ್ದಾಣ, ಕೋಟ ಕ್ಯಾಟಲ್‌ ಪಾಸ್‌ ಮತ್ತು ಬಸ್‌ ನಿಲ್ದಾಣ, ಕೋಟ ಪೆಟ್ರೋಲ್‌ ಬಂಕ್‌, ಕೋಟ ಮೂರ್‌ಕೈ, ಸಾಲಿಗ್ರಾಮ ರಥಬೀದಿ ಮತ್ತು ಬಸ್‌ ನಿಲ್ದಾಣ, ಸಾಸ್ತಾನ ಟೋಲ್‌ ಗೇಟ್‌, ಸಾಸ್ತಾನ ಬಸ್‌ ನಿಲ್ದಾಣ, ಮಾಬುಕಳ ಸೇತುವೆ, ಬ್ರಹ್ಮಾವರ ಆಕಾಶವಾಣಿಯಿಂದ ಎಸ್‌ಎಮ್‌ಎಸ್‌ ಕಾಲೇಜು, ಹೇರೂರು, ಕಲ್ಯಾಣಪುರ ಸೇತುವೆ, ಸಂತೆಕಟ್ಟೆ, ಅಂಬಾಗಿಲು, ನಿಟ್ಟೂರು, ಉಡುಪಿಯ ಪ್ರಮುಖ ಭಾಗಗಳಲ್ಲಿ ಬೀದಿ ದೀಪದ ವ್ಯವಸ್ಥೆ ಇದೆ. 

ಹೊಣೆಗಾರರು ಯಾರು?
ಜಿ.ಪಂ. ಸಿಇಒ ಶಿವಾನಂದ ಕಾಪಶಿಯವರನ್ನು ಉದಯವಾಣಿ ಮಾತನಾಡಿಸಿದಾಗ, “ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಯಾಗಿರುವ ನವಯುಗ ಮತ್ತು ಐಆರ್‌ಬಿ ಕಂಪೆನಿಗಳು ಬೀದಿ ದೀಪವನ್ನು ಅಳವಡಿಸಬೇಕು. ಈ ಹಿಂದೆ ಹೆದ್ದಾರಿ ನಿರ್ಮಾಣ ಸಂದರ್ಭ ಏನೆಲ್ಲ ವಸ್ತುಗಳನ್ನು ತೆರವುಗೊಳಿಸ ಲಾಗಿದೆಯೋ ಅವುಗಳನ್ನು ಸರಿಪಡಿಸಿಕೊಡ ಬೇಕಾಗಿರುವುದು ಗುತ್ತಿಗೆ ಪಡೆದ ಸಂಸ್ಥೆಯ ಕರ್ತವ್ಯ’ ಎಂದು ಹೇಳುತ್ತಾರೆ. ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆಯ ಟೋಲ್‌ ಮ್ಯಾನೇಜರ್‌ ರವಿಬಾಬು ಅವರನ್ನು ಈ ಕುರಿತು ಪ್ರಶ್ನಿಸಿದಾಗ “ನಮಗೆ ಎನ್‌ಎಚ್‌ಎಐ ಎಲ್ಲೆಲ್ಲಿ ಬೀದಿ ದೀಪ ಅಳವಡಿಸಲು ಸೂಚನೆ ನೀಡುತ್ತದೆಯೋ ಅಲ್ಲಿ  ಅಳವಡಿಸಿದ್ದೇವೆ. ಎನ್‌ಎಚ್‌ಎಐ ಆದೇಶವನ್ನು ಕಾರ್ಯರೂಪಕ್ಕೆ ತರುವುದು ಮಾತ್ರ ನಮ್ಮ ಕೆಲಸ’ ಎಂದರು. 

Advertisement

ಇದ್ದರೂ ಉರಿಯುತ್ತಿಲ್ಲ ಬೀದಿ ದೀಪ
ಉಪ್ಪೂರು ಬಸ್‌ ನಿಲ್ದಾಣದ ಬಳಿ ಮತ್ತು ಬ್ರಹ್ಮಾವರ ಆಕಾಶವಾಣಿಯಿಂದ ಧರ್ಮಾವರಂ ಆಡಿಟೋರಿಯಂವರೆಗೆ ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ಆದರೆ ಹಲವು ದಿನಗಳಿಂದ ಅದು ಉರಿಯುತ್ತಿಲ್ಲ.ಜಿಲ್ಲಾಡಳಿತ ಎಲ್ಲಿ ಬೀದಿ ದೀಪ ಬೇಕು ಎಂದು ಸೂಚನೆ ನೀಡಿದರೆ ಮಾತ್ರ ಅಲ್ಲಿ ಹಾಕಿಕೊಡುತ್ತೇವೆ.
– ವಿಜಯಕುಮಾರ್‌, 
ರಾ.ಹೆ. ಹಿರಿಯ ಅಧಿಕಾರಿ

ಬೀದಿ ದೀಪಗಳು ಎಲ್ಲೆಲ್ಲಿ ಬೇಕು ಎಂದು ಪಂಚಾಯತ್‌ಗಳು ಹೇಳಬೇಕು. ಬೀದಿ ದೀಪದ ಅವಶ್ಯಕತೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
– ಶೋಭಾ ಕರದ್ಲಾಂಜೆ,ಸಂಸದೆ

– ಹರೀಶ್‌ ಕಿರಣ್‌ ತುಂಗ

Advertisement

Udayavani is now on Telegram. Click here to join our channel and stay updated with the latest news.

Next