Advertisement
ನಗರದ ಹೃದಯ ಭಾಗವಾದ ಸಾಯಿಬಾಬಾ ದೇವಸ್ಥಾನದ ಮುಂಭಾಗ ಹಾಗೂ ಜೋಡ ಮಾರುತಿ ದೇವಸ್ಥಾನದ ಹತ್ತಿರ, ನಗರದ ಮಹೇಂದ್ರಕರ್ ಸರ್ಕಲ್, ಬೆಟಗೇರಿ ಬಸ್ ನಿಲ್ದಾಣ ಸೇರಿದಂತೆ ಅವಳಿ ನಗರದ 98 ಕಡೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹೈಮಾಸ್ಟ್ ವಿದ್ಯುದ್ದೀಪಗಳನ್ನು ಸ್ಥಾಪನೆ ಮಾಡಲಾಗಿದೆ. ಆರಂಭದಲ್ಲಿ ಸರಿಯಾಗಿ ಬೆಳಗಿದ ದೀಪಗಳು ನಂತರ ಕೆಟ್ಟು ನಿಂತಿವೆ. ಅದನ್ನು ದುರಸ್ತಿ ಮಾಡಲು ಅರ್ಧಕ್ಕೆ ಇಳಿಸಲಾಗಿದೆ. ಆದರೆ, ಇದುವರೆಗೂ ಅದನ್ನು ರಿಪೇರಿ ಮಾಡಿಸಲು ನಗರಸಭೆ ಮುಂದಾಗಿಲ್ಲ. ಹೀಗಾಗಿ, ನಿತ್ಯ ಅಲ್ಲಿ ಓಡಾಡುವ ಸಾರ್ವಜನಿಕರು ನಗರಸಭೆ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Related Articles
Advertisement
ಅವಳಿ ನಗರದಲ್ಲಿರುವ ಹೈಮಾಸ್ಟ್ ವಿದ್ಯುದ್ದೀಪಗಳು ಇದ್ದೂ ಇಲ್ಲದಂತಾಗಿವೆ. ಜನರು ಕತ್ತಲೆಯಲ್ಲಿ ಸಂಚಾರ ಮಾಡುವಂತಾಗಿದೆ. ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ವಿದ್ಯುದ್ದೀಪಗಳು ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕಳೆದ ಒಂದು ವರ್ಷದಿಂದ ದೀಪ ಉರಿಯುತ್ತಿಲ್ಲ. ಜನನಿಬಿಡ ಸ್ಥಳವಾದ ಸಾಯಿಬಾಬಾ ದೇವಸ್ಥಾನ, ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುದ್ದೀಪ ಉರಿಯದ ಕಾರಣ ಜನರು ತೊಂದರೆ ಪಡುವಂತಾಗಿದೆ. ಲಕ್ಷಗಟ್ಟಲೆ ಹಣ ವಿನಿಯೊಗಿಸಿ ಅಳವಡಿಸಿರುವ ದೀಪಗಳು ಶೋಕಿಗಾಗಿ ಮಾತ್ರ ಇದ್ದಂತೆ ಕಂಡುಬರುತ್ತಿವೆ. ಬೆಳಗಿನ ಸಮಯ ಹಾಗೂ ಸಂಜೆ ವೇಳೆ ದೀಪ ಉರಿಯದ ಕಾರಣ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ, ಕೂಡಲೇ ಹೈಮಾಸ್ಟ್ ವಿದ್ಯುದ್ದೀಪಗಳ ವ್ಯವಸ್ಥೆ ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ:
ಹೈಮಾಸ್ಟ್ ವಿದ್ಯುದ್ದೀಪ ಸ್ಥಗಿತಗೊಂಡಿದ್ದರ ಬಗ್ಗೆ ನಗರಸಭೆ ಸಹಾಯಕ ಅಭಿಯಂತರರು, ನಗರಸಭೆ ಆಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಇದರಿಂದ ರಾತ್ರಿ ವೇಳೆ ಪಾದಚರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ವಾಹನ ಸವಾರರು ಏಕಾಏಕಿ ರಸ್ತೆ ಬದಿಯಲ್ಲಿ ಬರುವುದರಿಂದ ಹಿರಿಯ ನಾಗರಿಕರಿಗೆ ರಸ್ತೆ ದಾಟುವುದು ಕಷ್ಟವಾಗಿದೆ.
ರೋಪ್ ಕಟ್-ಅರ್ಧಕ್ಕೆ ನಿಂತ ವಿದ್ಯುದ್ದೀಪ:
ಗದಗ-ಬೆಟಗೇರಿ ಅವಳಿ ನಗರದ 98 ಕಡೆಗಳಲ್ಲಿ ಹೈಮಾಸ್ಟ್ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ರೋಪ್(ಗಯಿ) ಕಟ್ ಆಗಿ ಅರ್ಧಕ್ಕೆ ನಿಂತಿದ್ದು, ವಿದ್ಯುತ್ ಪೂರೈಕೆ ಸಂಪೂರ್ಣ ಬಂದ್ ಆಗಿದೆ. ಉಳಿದ ಕಡೆಗಳಲ್ಲಿ ಕೇಬಲ್ ಕಟ್ ಆಗಿ ವಿದ್ಯುತ್ ಸರಬರಾಜು ಬಂದ್ ಆಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳು, ಟೆಂಡರ್ ಕರೆಯಲಾಗಿದೆ. ಕೂಡಲೇ ಹೈಮಾಸ್ಟ್ ವಿದ್ಯುದ್ದೀಪಗಳನ್ನು ಸರಿಪಡಿಸಲಾಗುವುದು ಎಂಬ ಉತ್ತರ ನೀಡುತ್ತಿದ್ದಾರೆ.
ತುಕ್ಕು ಹಿಡಿದ ಸ್ವಿಚ್ ಬಾಕ್ಸ್
ಹೈಮಾಸ್ಟ್ ವಿದ್ಯುದ್ದೀಪಗಳ ಕಂಬ ಹಾಗೂ ಸ್ವಿಚ್ ಬಾಕ್ಸ್‌ಗಳು ಮಳೆ ನೀರಿಗೆ ತುಕ್ಕು ಹಿಡಿಯುತ್ತಿವೆ. ಕಂಬಕ್ಕೆ 5 ಅಡಿ ಎತ್ತರಕ್ಕಿದ್ದ ಸ್ವಿಚ್ ಬಾಕ್ಸ್‌ಗಳು ಕೆಲವೊಂದು ಕಡೆಗಳಲ್ಲಿ ನೆಲಕ್ಕುರುಳಿ ಬಿದ್ದಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಳಗಡೆ ಬಿದ್ದ ಸ್ವಿಚ್ ಬಾಕ್ಸ್‌ಗಳಲ್ಲಿ ವಿದ್ಯುತ್ ಹರಿದ ಕಾರಣ ನಗರಸಭೆ ನೌಕರರು ಅವುಗಳ ವಿದ್ಯುತ್ ಲೈನ್ ಕಟ್ ಮಾಡಿ ಶಾಶ್ವತ ಬಂದ್ ಮಾಡಿ ಕೈತೊಳೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ವಿವಿಧ ಕಡೆ ವಿದ್ಯುದ್ದೀಪಗಳು ಬಂದ್ ಆಗಿವೆ. ಕೂಡಲೇ ಅ ಧಿಕಾರಿಗಳು ಇಲ್ಲಿನ ಹೈಮಾಸ್ಟ್ ದೀಪಗಳ ದುರಸ್ತಿಗೆ ಮುಂದಾಗಬೇಕು. –ಮಲ್ಲಿಕಾರ್ಜುನ ಬಾವಿಕಟ್ಟಿ, ಬೆಟಗೇರಿ ನಿವಾಸಿ
ಪ್ರತಿ ವಾರ್ಡ್‌ನಲ್ಲಿ ಹೈಮಾಸ್ಟ್ ವಿದ್ಯುದ್ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತಹಂತವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಹೈಮಾಸ್ಟ್ ವಿದ್ಯುದ್ದೀಪಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು. -ಉಷಾ ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ
ಅರುಣಕುಮಾರ ಹಿರೇಮಠ