ಕಾರ್ಕಳ: ಶ್ರಮ ಪಟ್ಟರೆ ಅಲ್ಪ ಜಮೀನಿನಲ್ಲಿ ಅಧಿಕ ಆದಾಯ ಗಳಿಸ ಬಹುದು ಎಂಬುದಕ್ಕೆ ಕೆರ್ವಾಶೆ ಮಯ್ಯದಿ ಹಸನಬ್ಬ ಅವರೇ ಸಾಕ್ಷಿಯಾಗಿದ್ದಾರೆ. ತನ್ನಲ್ಲಿರುವ ಅಲ್ಪ ಭೂಮಿಯಲ್ಲಿ ಅಡಿಕೆ ಕೃಷಿ ನಡೆಸಿ ಭರ್ಜರಿ ಆದಾಯ ಗಳಿಸಿದ್ದು ಯಶಸ್ವಿ ಕೃಷಿಕರೆನಿಸಿಕೊಂಡಿದ್ದಾರೆ.
ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಹಸನಬ್ಬ ಮಯ್ಯದಿ ಅವರಿಗೆ ಕೃಷಿಯ ಬಗ್ಗೆ ಅಪಾರ ಒಲವು. ತನ್ನಲ್ಲಿರುವ ಅಲ್ಪ ಜಾಗದಲ್ಲಿ ಅಡಿಕೆ ಬೆಳೆದಿದ್ದಾರೆ. ಅದಕ್ಕವರು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಕಳೆದ ಆರು ಏಳು ವರ್ಷಗಳಿಂದ ಈ ಯೋಜನೆಯ ನೆರವು ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಇವರು ಹುಟ್ಟು ಅಂಗವಿಕಲರು . ಒಂದು ಕಾಲು ಶೇ. 40 ರಷ್ಟು ಊನ ಇದೆ. ಕೃಷಿ ಮೇಲೆ ಅವರಿಟ್ಟಿರುವ ಪ್ರೀತಿ ಅವರ ಕೃಷಿ ಕಾಯಕಕ್ಕೆ ಅಂಗವಿಕಲತೆ ಅಡ್ಡಿಯಾಗಿಲ್ಲ. ಉದ್ಯೋಗ ಖಾತರಿ ಯೋಜನೆಯ ನೆರವು ಪಡೆದು ತನ್ನ ಒಂದು ಎಕರೆ ಐದು ಸೆಂಟ್ಸ್ ಜಮೀನಿನಲ್ಲಿ 200 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದು 150 ಗಿಡಗಳು ಫಸಲು ನೀಡುತ್ತಿವೆ. ಅಡಿಕೆಗೂ ಉತ್ತಮ ದರವಿದ್ದು ಅಡಿಕೆ ಇಳುವರಿಗೆ ಬಂದಿದ್ದು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಈ ಬಾರಿ ಅವರು 2.5 ಲಕ್ಷಕ್ಕೂ ಅಧಿಕ ಆದಾಯ ಕೇವಲ ಅತ್ಯಲ್ಪ ಕೃಷಿಯಿಂದ ಪಡೆದಿದ್ದಾರೆ. ಇನ್ನು 50 ಸಸಿಗಳು ಫಸಲು ನೀಡಲು ಬಾಕಿಯಿದೆ. ಮುಂದೆ ಆದಾಯ ಮತ್ತಷ್ಟು ಹೆಚ್ಚಳವಾಗಿ ಕುಟುಂಬದ ಜೀವನಕ್ಕೆ ಯಾವುದೇ ಸಮಸ್ಯೆ ಆಗದು ಎನ್ನುತ್ತಾರೆ ಅವರು.
ಹಸನಬ್ಬರದು ಪುಟ್ಟ ಕುಟುಂಬ, ಹೆಂಡತಿ ಇಬ್ಬರು ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುವ ಇವರಿಗೆ ಅಡಿಕೆ ಕೃಷಿಯೇ ಆಧಾರ. ಈ ಚಟುವಟಿಕೆಗಳಲ್ಲಿ ಇವರ ಪತ್ನಿಯೂ ಸಹಕರಿಸುತ್ತಾರೆ. ಕೃಷಿಯ ಬಗ್ಗೆ ದಂಪತಿಗಳಿಬ್ಬರಿಗೂ ಆಸಕ್ತಿಯಿರುವುದರಿಂದಲೇ ಅದರಲ್ಲೆ ಮುಂದುವರಿದಿದ್ದು ಬೇರೆ ಉದ್ಯೋಗದ ಕಡೆ ಗಮನಹರಿಸಲಿಲ್ಲ ಎನ್ನುತ್ತಾರೆ ದಂಪತಿ.
ತ್ಯಾಜ್ಯ ನೀರಿನ ನಿರ್ವಹಣೆಗೆ 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಬಚ್ಚಲು ಗುಂಡಿ ನಿರ್ಮಿಸಿಕೊಂಡಿದ್ದಾರೆ. ಇನ್ನು ಪ್ರಸ್ತುತ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ಅನುದಾನ ಬಳಸಿ ಕೊಂಡು ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಮುಂದಾಗಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಗೊಬ್ಬರ ಉತ್ಪಾದನೆಗೆ ಸಕಲ ತಯಾರಿ ನಡೆಸುತ್ತಿದ್ದಾರೆ. ಪಿಡಿಒ ಹಾಗೂ ಸಿಬಂದಿ ನೀಡಿದ ಮಾಹಿತಿಯಿಂದಾಗಿ ಉದ್ಯೋಗ ಖಾತರಿ ಯೋಜನೆಯಡಿ ಅಡಿಕೆ ತೋಟ ನಿರ್ಮಾಣ ಮಾಡಲು ಸಹಕಾರಿಯಾಯಿತು. ವೈಯ ಕ್ತಿಕವಾಗಿ ನನಗೆ ಉದ್ಯೋಗ ಖಾತರಿ ಯೋಜನೆಯಿಂದ ಸಿಗುವ ಅನುದಾನದಿಂದ ಒಳ್ಳೆಯ ಪ್ರಯೋಜನವಾಗಿದೆ. ಕೃಷಿಕರಿಗೆ ಕೃಷಿಯ ಜತೆಗೆ ಕೃಷಿಯೇತರ ಚಟು ವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಈ ಯೋಜನೆಯಿಂದ ಇನ್ನೂ ಹೆಚ್ಚು ಪ್ರಯೋಜನ ಸಾಧ್ಯ. ಇದರ ಜತೆಗೆ ಹೆಚ್ಚಿನ ಆದಾಯ ಗಳಿಸಲು ನೆರವಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ ಗೊಬ್ಬರ ಗುಂಡಿ ನಿರ್ಮಾಣಕ್ಕೂ ಅರ್ಜಿ ಸಲ್ಲಿಸಲಾಗಿದೆ ಎಂದು ಮುಯ್ಯದ್ದಿ ತಿಳಿಸಿದ್ದಾರೆ.
ಉತ್ತಮ ಆದಾಯ
2021-22ನೇ ಸಾಲಿನಲ್ಲಿ ಕೈಗೊಂಡ ಮಹಿಳಾ ಕಾಯಕೋತ್ಸವ, ಜಾಬ್ ಕಾರ್ಡ್, ರೈತಬಂಧು ಮತ್ತು ಮಿಷನ್-25 ಅಭಿಯಾನಗಳ ಮೂಲಕ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಹೆಚ್ಚು ವೈಯಕ್ತಿಕ ಕಾಮಗಾರಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಮಯ್ಯದ್ದಿ ಅವರು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.-
ಹರೀಶ್, ಪಿಡಿಒ ಕೆರ್ವಾಶೆ
– ಬಾಲಕೃಷ್ಣ ಭೀಮಗುಳಿ