ಬೆಂಗಳೂರು: ತನ್ನ ಪ್ರೇಮ ನಿವೇದನೆ ಒಪ್ಪಿಕೊಳ್ಳದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಅಪ್ರಾಪ್ತ ವಯಸ್ಕ ಬಾಲಕಿಗೆ ಬೆದರಿಕೆ ಹಾಕಿದ್ದ ಯುವಕನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬಾಲಕಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಜೈಲು ಸೇರಿದ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊಸ ಕಲ್ಲನಾಯಕನಹಳ್ಳಿ ನಿವಾಸಿ ಪವನ್ (26) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ. ಜಾಮೀನು ನೀಡಲು ನಿರಾಕರಿಸಿ ಆದೇಶಿಸಿದೆ.
ಆರೋಪಿ ಜೈಲಿನಿಂದ ಹೊರಬಂದರೆ ಆ್ಯಸಿಡ್ ದಾಳಿ ನಡೆಸುವ ಭೀತಿಯಿದೆ. ಆದ್ದರಿಂದ ಜಾಮೀನು ಕೊಡಬಾರದು ಎಂದು ಬಾಲಕಿ ಮನವಿ ಮಾಡಿದ್ದಳು. ಇದನ್ನು ಪರಿಗಣಿಸಿದ ನ್ಯಾಯಪೀಠ, ಸಂತ್ರಸ್ತೆಯು ಶಾಲೆಗೆ ಹೋಗುತ್ತಿರುವ ವೇಳೆ ಆರೋಪಿ ಹಿಂಬಾಲಿಸಿಕೊಂಡು ಹೋಗಿ ಬಲವಂತವಾಗಿ ತಡೆದು ನಿಲ್ಲಿಸುತ್ತಿದ್ದ. ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ತನ್ನೊಂದಿಗೆ ಸಹಕರಿಸದಿದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಜಾಮೀನು ಮಂಜೂರಾತಿಗೆ ಮನವಿ ಮಾಡಿದ್ದಾನೆ. ಒಂದು ವೇಳೆ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ತನ್ನ ಮೇಲೆ ಆ್ಯಸಿಡ್ ಎರಚಬಹುದು ಎಂದು ಸಂತ್ರಸ್ತೆ ಆತಂಕ ವ್ಯಕ್ತಪಡಿಸಿದ್ದಾರೆ.