Advertisement

ಅಂತರ್ಧರ್ಮೀಯ ಜೋಡಿಗೆ ಹೈಕೋರ್ಟ್‌ ಆಸರೆ

12:08 PM Sep 13, 2018 | |

ಬೆಂಗಳೂರು: ಅಂತರ್‌ ಧರ್ಮೀಯ ಪ್ರೇಮಿಗಳು ಕಾನೂನು ಪ್ರಕಾರ ಬೇರ್ಪಟ್ಟರೂ, ಅವರ ಕಣ್ಣೀರ ಕಥೆಗೆ ಮರುಗಿದ ಹೈಕೋರ್ಟ್‌, ಮಾನವೀಯ ನೆಲೆಗಟ್ಟಿನಲ್ಲಿ ಆ ಜೋಡಿಗೆ ಆಸರೆಯಾಗಿದೆ.

Advertisement

ಸೇವಾ ಸಂಸ್ಥೆಯೊಂದರ ಆಶ್ರಮದಲ್ಲಿರುವ 17 ವರ್ಷದ ಸಂತ್ರಸ್ತ ಗರ್ಭಿಣಿಯನ್ನು ನೋಡಿ, ಆರೈಕೆ ಮಾಡಲು ಜೈಲಿನಲ್ಲಿರುವ ಆಕೆಯ ಪತಿಗೆ ಅವಕಾಶ ನೀಡಿ ಹೈಕೋರ್ಟ್‌ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.

ಸಂತ್ರಸ್ತೆಯ ಕರುಣಾಜನಕ ಹಿನ್ನೆಲೆ ಹಾಗೂ ಆಕೆ ಸಂಬಂಧಿಕರ ಜತೆ ಹೋಗಲು ಇಚ್ಛಿಸದ ನಿರ್ಧಾರವನ್ನು ಪರಿಗಣಿಸಿ ಇಂತಹದ್ದೊಂದು ಮಹತ್ವದ ತೀರ್ಪು ನೀಡಿದೆ. ಸಂತ್ರಸ್ತೆಗೆ ಪತಿಯ ಆಸರೆ ಅಗತ್ಯವಿದೆ. ಹೀಗಾಗಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಕೆಯನ್ನು ನೋಡಲು ಆಶ್ರಮ ಮುಖ್ಯಸ್ಥರು ಪತಿಗೆ ಅವಕಾಶ ನೀಡಬೇಕು. ಹೊರಗೆ ಕರೆದೊಯ್ದರೆ ಸಂಜೆ 5 ಗಂಟೆಯೊಳಗೆ ಕರೆತರಬೇಕು. ಆತನ ಭೇಟಿಗೆ ಕಾರಾಗೃಹ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ನಜೀರ್‌, ಖಾಸಗಿ ಕಂಪನಿಯೊಂದರ ಕಾರು ಚಾಲಕ. ತಂದೆಯನ್ನು ಕಳೆದುಕೊಂಡಿರುವ ಸಂತ್ರಸ್ತೆ ಆತನ ಮನೆಯ ಸಮೀಪವೇ ಇರುವ ಚಿಕ್ಕಪ್ಪನ ಮನೆಯಲ್ಲಿ
ವಾಸವಿದ್ದರು. 

ಈ ಮಧ್ಯೆ ಸಂತ್ರಸ್ತೆಗೆ ನಜೀರ್‌ ಪರಿಚಯವಾಗಿದ್ದು, ಚಿಕ್ಕಪ್ಪನಿಂದ ಅನುಭವಿಸುತ್ತಿದ್ದ ಲೈಂಗಿಕ, ದೈಹಿಕ ಕಿರುಕುಳ ಹೇಳಿಕೊಂಡಿದ್ದಳು. ಜತೆಗೆ ತನಗೆ ಕೆಲಸ ಕೊಡಿಸುವಂತೆ ಕೋರಿದ್ದಳು. ಹೀಗಾಗಿ ಆತ ಕೆಲಸ ಕೊಡಿಸಿದ್ದ. ಬಳಿಕ ಇಬ್ಬರ
ನಡುವೆ ಪ್ರೀತಿಯಾಗಿ ಕೆಲ ತಿಂಗಳ ಹಿಂದೆ ಮನೆ ಬಿಟ್ಟು ಹೋಗಿ ವಿವಾಹವಾಗಿದ್ದರು. ಅಂತರ್‌ ಧರ್ಮೀಯ ವಿವಾಹವಾದ ಕಾರಣ ಚಿಕ್ಕಪ್ಪನ ಕುಟುಂಬದವರು ವಿರೋಧಿಸುವ ಭಯದಿಂದ ಮತ್ತೆ ಮನೆಗೆ ಹೋಗಿರಲಿಲ್ಲ. ಸಂತ್ರಸ್ತೆಯನ್ನು
ಹುಡುಕಿಕೊಡುವಂತೆ ಆಕೆಯ ಚಿಕ್ಕಮ್ಮ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. 

Advertisement

ಈ ಮಧ್ಯೆ ಆಕೆಯ ಸಂಬಂಧಿಕರು ದಾಖಲಿಸಿದ ದೂರಿನ ಅನ್ವಯ ಐಪಿಸಿ ಕಲಂ 376 ಹಾಗೂ ಪೋಸ್ಕೋ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ನಜೀರ್‌ನನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸಂತ್ರಸ್ತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ನೆರವಿನೊಂದಿಗೆ ಖಾಸಗಿ ಸಂಸ್ಥೆಯ ಬಾಲ ಮಂದಿರಕ್ಕೆ ಕಳುಹಿಸಿಕೊಡಲಾಗಿತ್ತು.

ಈ ನಡುವೆ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಈ ಪ್ರಕರಣವನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕಿದೆ. ಹೀಗಾಗಿ, ಗರ್ಭಿಣಿಯಾಗಿರುವ ಆಕೆ ಮಗುವಿಗೆ ಜನ್ಮ ನೀಡುವ ತನಕ ಆಶ್ರಮದಲ್ಲೇ ಇರಲಿ. ಆಕೆಗೆ ತಜ್ಞ ವೈದ್ಯರ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಬೇಕು. ಆಸ್ಪತ್ರೆ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಆದೇಶಿಸಿದೆ.

ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಅಥವಾ ಆತನ ಕುಟುಂಬ ಸದಸ್ಯರಿಗೆ ಯಾರಾದರೂ ತೊಂದರೆ ಕೊಡುವುದು, ಬೆದರಿಸುವುದು ಗೊತ್ತಾದರೇ ಕೂಡಲೇ ಕೆ.ಆರ್‌. ಪುರ ಠಾಣೆ ಪೊಲೀಸರು ರಕ್ಷಣೆ ಒದಗಿಸಬೇಕು. ಅವರ ಜೀವಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ ಎಂದು ನ್ಯಾಯಪೀಠ ನಿರ್ದೇಶಿಸಿದೆ. 

ಚಿಕ್ಕಪ್ಪನ ಕಿರುಕುಳದಿಂದ ನೊಂದಿದ್ದೇನೆ! “ತಂದೆ ತೀರಿಕೊಂಡ ಬಳಿಕ ಚಿಕ್ಕಪ್ಪ ನೀಡಿದ ದೈಹಿಕ ಕಿರುಕುಳದಿಂದ ನೊಂದಿದ್ದೇನೆ. ಸಂಬಂಧಿಕರಿಂದಲೂ ಕಿರುಕುಳ ಅನುಭವಿಸಿದ್ದೇನೆ. ಚಿಕ್ಕಮ್ಮನ ಮನೆಗೆ ಹೋಗಲು ಇಷ್ಟವಿಲ್ಲ. ವಿವಾಹವಾಗಿರುವ ಯುವಕನ ಜತೆ ಬದುಕುತ್ತೇನೆ ಎಂದು ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌ ನೇತೃತ್ವದ ವಿಭಾಗೀಯ ಪೀಠದೆದುರು ಸಂತ್ರಸ್ತೆ ಅಳಲು ತೋಡಿಕೊಂಡಿದ್ದರು. ಯುವಕ ಕೂಡ, ತಾನು ಆಕೆಯ ಜವಾಬ್ದಾರಿ ಹೊರುತ್ತೇನೆ ಎಂದಿದ್ದ. ಇಬ್ಬರ ಹೇಳಿಕೆ ಪರಿಗಣಿಸಿದ ನ್ಯಾಯಪೀಠ, ಸಂತ್ರಸ್ತೆಗೆ 17 ವರ್ಷವಾಗಿದ್ದು,
ತನ್ನಿಷ್ಟದ ನಿರ್ಧಾರ ಕೈಗೊಳ್ಳಲು ಸಮರ್ಥರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರತಿ ತಿಂಗಳ ಎರಡನೇ ಶುಕ್ರವಾರ ಪ್ರಕರಣದ ವಿಚಾರಣೆ (ಇನ್‌ ಕ್ಯಾಮೆರಾ) ನಡೆಸಲು ನಿರ್ಧರಿಸಿದ್ದು, ಸೆ.14ರಂದು ವಿಚಾರಣೆ ನಡೆಯಲಿದೆ.
 ಮಂಜುನಾಥ ಲಘುಮೇನಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next