Advertisement

ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಕಿಡಿ

12:20 PM Aug 08, 2018 | Team Udayavani |

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟೀಷರಿಂದ ಜನರು ತೊಂದರೆ ಅನುಭವಿಸುತ್ತಿದ್ದರು. ಆದರೆ, ಈಗ ಸರ್ಕಾರಿ ಅಧಿಕಾರಿಗಳು ಜನರ ರಕ್ತ ಹೀರುತ್ತಿದ್ದಾರೆ ಎಂದು ಹೈಕೋರ್ಟ್‌ ಕಿಡಿಕಾರಿದೆ.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಮೂರು ವರ್ಷವಾದರೂ ಕೂಲಿ ನೀಡದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ,  ಈ ಧೋರಣೆ ಅನುಸರಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಹೀಗೆ ಮುಂದುವರಿದರೆ ಜನ ದಂಗೆ ಏಳುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿತು.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ಮೂರು ವರ್ಷ ಕಳೆದರೂ ಸಿಗದ ಕೂಲಿ ಹಣ ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಶಿರಾ ತಾಲೂಕಿನ ತಾಳಗುಂದ ಗ್ರಾಮದ 60 ಮಂದಿ ಯೋಜನೆಯ ಫ‌ಲಾನುಭವಿಗಳು ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ಬಿ.ವೀರಪ್ಪ  ಅವರಿದ್ದ ಏಕಸದಸ್ಯ ಪೀಠ, ರಾಜ್ಯಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿತು. ಜನರು ಮಳೆ, ಬಿಸಿಲು ಲೆಕ್ಕಿಸದೆ ಕೆಲಸ ಮಾಡಿದ ಕೂಲಿ ಹಣವನ್ನು ಮೂರು ವರ್ಷವಾದರೂ ನೀಡುವುದಿಲ್ಲ ಎಂದರೆ ಏನರ್ಥ? ಅಧಿಕಾರಿಗಳ ಕಾರ್ಯವೈಖರಿ ಹೇಗಿರಬಹುದು? ಎಂದರು.

ವಿಚಾರಣೆ ಹಾಜರಾಗಿದ್ದ ಮನರೇಗಾ ಆಯುಕ್ತರು ಯೋಜನೆಯ ಫ‌ಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ಪಂಚಾಯ್ತಿಗಳಿಗೆ ಸೇರಿದೆ ಎಂಬ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಹೀಗೆ ಒಬ್ಬರ ಮೇಲೊಬ್ಬರು ಹೇಳಿಕೊಂಡು ಹಣ ನೀಡದಿದ್ದರೆ ಕೆಲಸ ಮಾಡಿದ ಕೂಲಿ ಮಾಡಿದ ಜನ ಏನು ಮಾಡಬೇಕು. ಕೂಲಿ ಮಾಡಿದ ಮೇಲೆ ಹಣ ನೀಡಬೇಕು.

Advertisement

ಅದನ್ನು ಬಿಟ್ಟು ಸಬೂಬು ಹೇಳಬಾರದು.  ಹಣವಿಲ್ಲದಿದ್ದರೆ ತಮ್ಮ ಮನೆ ಮಾರಿ ಸ್ವಂತ  ಹಣದಿಂದ ಅಧಿಕಾರಿಗಳು ನೀಡಲಿ ಎಂದು ಹೇಳಿದರು. ಅಲ್ಲದೆ, ಮುಂದಿನ ವಿಚಾರಣೆ ವೇಳೆ ಅರ್ಜಿದಾರರಿಗೆ ಕೂಲಿ ಹಣವನ್ನು ಯಾರು ನೀಡಬೇಕು, ದಾಖಲೆಗಳು ಎಲ್ಲಿವೆ ಎಂಬುದಕ್ಕೆ ಆಕ್ಷೇಪಣೆ ಸಲ್ಲಿಸಿ ಎಂದು ಭೂಪಸಂದ್ರ ಹಾಗೂ ತಾಳಗುಂದ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಪೀಠ, ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದರೆ ನಿಮ್ಮ ಜೇಬಿನಿಂದ ಹಣ ಕಟ್ಟಿಸಲು ಆದೇಶಿಸಬೇಕಾಗುತ್ತದೆ ಎಂದು ತಾಕೀತು ಮಾಡಿ ಒಂದು ವಾರದ ಅವಧಿಗೆ ವಿಚಾರಣೆ ಮುಂದೂಡಿತು.

ಭೂಪ ಸಂದ್ರ ಗ್ರಾಪಂಗೆ ವ್ಯಾಪ್ತಿಯ ತಾಳಗುಂದ ಗ್ರಾಮದ ಕದರಣ್ಣ ಸೇರಿದಂತೆ 60 ಮಂದಿ 2013 -14ನೇ ಸಾಲಿನಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದರು. ಈ ಮಧ್ಯೆ  2015ರಲ್ಲಿ ತಾಳಗುಂದ ಪಂಚಾಯಿತಿ ರಚನೆಯಾಯಿತು. ಹೀಗಾಗಿ ಕೂಲಿ ಹಣದ ಬಿಡುಗಡೆಗೆ  ಎರಡೂ ಪಂಚಾಯಿತಿಗಳು ನಮ್ಮ ವ್ಯಾಪ್ತಿಗೆ  ಬರುವುದಿಲ್ಲ ಎಂದು ಹೇಳಿ ಹಣ  ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ, ಹಣ ಬಿಡುಗಡೆಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆಹೋಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next