ಬೆಂಗಳೂರು: ಚುನಾವಣಾ ತಕರಾರು ಅರ್ಜಿಗಳಿಗೆ ಸಂಬಂಧಿಸಿದಂತೆ ಶಾಸಕರಾದ ಜಗದೀಶ್ ಶೆಟ್ಟರ್, ತನ್ವೀರ್ ಸೇಠ್ ಅವರಿಗೆ ಶುಕ್ರವಾರ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಇಬ್ಬರು ಶಾಸಕರು ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಆದ್ದರಿಂದ ಅವರ ಶಾಸಕತ್ವವನ್ನು ಅಸಿಂಧುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.
ಶಾಸಕ ಜಗದೀಶ್ ಶೆಟ್ಟರ್ ವಿರುದ್ಧ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಹಾಗೂ ತನ್ವೀರ್ ಸೇಠ್ ವಿರುದ್ಧ ಪರಾಜಿತ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಮಜೀದ್ ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಗಳಿಸಿರುವ ಮತಗಳಿಗೂ ಹಾಗೂ ಆ ಕ್ಷೇತ್ರದಲ್ಲಿ ಚಲಾವಣೆಯಾಗಿರುವ ಒಟ್ಟು ಮತಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳಲ್ಲಿರುವ ಮತಗಳು ಒಂದಕ್ಕೊಂದು ತಾಳೆಯಾಗಿಲ್ಲ. ಹೀಗಾಗಿ ಆ ಕ್ಷೇತ್ರದ ಮತಗಳನ್ನು ಮರು ಎಣಿಕೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಮಹೇಶ್ ನಾಲವಾಡ ಅರ್ಜಿಯಲ್ಲಿ ಕೋರಿದ್ದಾರೆ.
ಅದೇ ರೀತಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕೆಲ ಮತಗಟ್ಟೆಯಲ್ಲಿ ತಮಗೆ ಚಲಾವಣೆಯಾದ ಮತಗಳು ಶೂನ್ಯ ಎಂಬುದಾಗಿ ಇವಿಎಂ ತಿಳಿಸಿದೆ. ಆದರೆ, ಆ ಮತಗಟ್ಟೆಗಳಲ್ಲಿ ಸಾಕಷ್ಟು ಜನ ನನಗೆ ಮತ ಹಾಕಿದ್ದಾರೆ. ಹೀಗಾಗಿ ಮತಗಳು ದುರ್ಬಳಕೆಯಾಗಿದ್ದು, ತನ್ವೀರ್ ಸೇಠ್ ಅವರು ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಅಬ್ದುಲ್ ಮಜೀದ್ ಕೋರಿದ್ದಾರೆ.