Advertisement

ಕಲಾಪ ಬಹಿಷ್ಕಾರ : ವಕೀಲರ ಸಂಘಗಳಿಗೆ ಹೈಕೋರ್ಟ್‌ ನೋಟಿಸ್‌

06:57 PM Mar 12, 2021 | Team Udayavani |

ಬೆಂಗಳೂರು: ವಿವಿಧ ಕಾರಣಗಳಿಗೆ ಕೋರ್ಟ್‌ ಕಲಾಪದಿಂದ ಹೊರಗುಳಿದ ಹಿನ್ನೆಲೆಯಲ್ಲಿ ದಾವಣಗೆರೆ, ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಪಾಂಡವಪುರ ವಕೀಲರ ಸಂಘಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತು ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ನ್ಯಾಯಾಂಗ ನಿಂದನೆ ಪ್ರಕರಣದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ದಾವಣಗೆರೆ, ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಪಾಂಡವಪುರ ವಕೀಲರ ಸಂಘದ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ನೋಟಿಸ್‌ ಜಾರಿಗೆ ಆದೇಶಿಸಿ, ಏಪ್ರಿಲ್‌ 12ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ವಕೀಲ ಸಮುದಾಯ (ಬಾರ್‌)ದ ಮುಖ್ಯಸ್ಥರಾಗಿರುವ ಅಡ್ವೋಕೇಟ್‌ ಜನರಲ್‌ ಸಾಂವಿಧಾನಿಕ ಹುದ್ದೆಯ ಜೊತೆಗೆ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರೂ ಆಗಿರುತ್ತಾರೆ. ಆದ್ದರಿಂದ ಈ ಪ್ರಕರಣದಲ್ಲಿ ಹಾಜರಾಗಿ ನ್ಯಾಯಾಲಯಕ್ಕೆ ನೆರವು ನೀಡಬೇಕು ಎಂದು ಅಡ್ವೋಕೇಟ್‌ ಜನರಲ್‌ ಅವರಿಗೆ ಸೂಚಿಸಿದ ನ್ಯಾಯಪೀಠ, ಕೋರ್ಟ್‌ ಆದೇಶದ ಪ್ರತಿ ಹಾಗೂ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ಅಡ್ವೋಕೇಟ್‌ ಜನರಲ್‌ ಅವರಿಗೆ ತಲುಪಿಸಬೇಕು ಎಂದು ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ : ದುರಾಡಳಿತದಿಂದ ನಿರುದ್ಯೋಗ ಹೆಚ್ಚಳ; ಈಶ್ವರ ಖಂಡ್ರೆ

Advertisement

“ದಂಡನೆಗೊಳಪಡಿಸುವ ಉದ್ದೇಶದಿಂದ ಈ ನ್ಯಾಯಾಂಗ ನಿಂದನೆ ದಾಖಲಿಸಿಕೊಂಡಿಲ್ಲ. ಕೋರ್ಟ್‌ ಕಲಾಪಗಳ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಬಹಳ ಸ್ಪಷ್ಟವಾಗಿದೆ. ಈ ತೀರ್ಪನ್ನು ಎಲ್ಲರೂ ಗೌರವಿಸಬೇಕಾಗುತ್ತದೆ. ಪರಿಣಾಮಕಾರಿ ನ್ಯಾಯದಾನ ಪ್ರಕ್ರಿಯೆಯಲ್ಲಿ ವಕೀಲರು ಪ್ರಮುಖ ಭಾಗಿದಾರರಾಗಿದ್ದಾರೆ. ಅವರ ಸಹಕಾರ ಇಲ್ಲದೇ ಕೋರ್ಟ್‌ ಕಲಾಪ ನಡೆಸುವುದು, ತ್ವರಿತ ನ್ಯಾಯದಾನ ಪ್ರಕ್ರಿಯೆ ಕೈಗೊಂಡು ಕಕ್ಷಿದಾರರು ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನ್ಯಾಯದಾನ ಪ್ರಕ್ರಿಯೆಗೆ ನ್ಯಾಯಾಲಯ (ಬೆಂಚ್‌) ಮತ್ತು ವಕೀಲರು (ಬಾರ್‌) ಇಬ್ಬರು ಬದ್ಧತೆ ಪ್ರದರ್ಶಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳಲಾಗಿದೆ’ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ವಿವಿಧ ಕಾರಣಗಳನ್ನು ಮುಂದಿಟ್ಟು ಕೋರ್ಟ್‌ ಕಲಾಪ ಬಹಿಷ್ಕರಿಸುವಂತೆ ಮಂಡ್ಯ ಜಿಲ್ಲಾ ವಕೀಲರ ಸಂಘ ಕರೆ ನೀಡಿತ್ತು. ಅದರಂತೆ, ಮದ್ದೂರು, ಕೆ.ಆರ್‌. ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮಳವಳ್ಳಿ ಮತ್ತು ಪಾಂಡವಪುರ ವಕೀಲರು ಜನೆವರಿ ಮತ್ತು ಫೆಬ್ರವರಿಯಲ್ಲಿ ಕೋರ್ಟ್‌ ಕಲಾಪಗಳಿಂದ ಹೊರಗುಳಿದಿದ್ದರು. ಅದೇ ರೀತಿ ಜ.29 ಮತ್ತು ಫೆ.8ರಂದು ಕೋರ್ಟ್‌ ಕಲಾಪಗಳಿಂದ ದೂರ ಉಳಿಯುವಂತೆ ದಾವಣಗೆರೆ ಜಿಲ್ಲಾ ವಕೀಲರ ಸಂಘ ಕರೆ ಕೊಟ್ಟಿತ್ತು. ಇದಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳಲು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಸೂಚಿಸಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಕೈ ಬಿಡುವಂತೆ ಬೆಂಗಳೂರು ವಕೀಲರ ಸಂಘ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next