ಬೆಂಗಳೂರು: ಜೆಡಿಎಸ್ ಪಕ್ಷದ ಕಚೇರಿ ನಿರ್ಮಾಣ ಸಂದರ್ಭದಲ್ಲಿ ಕಾರ್ಮಿಕ ಕೃಷ್ಣಪ್ಪ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಸೋಮವಾರ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ಮರು ತನಿಖೆ ನಡೆಸಲು ಹಾಗೂ ಕುಟುಂಬದವರಿಗೆ ಪರಿಹಾರ ನೀಡಲು ಆದೇಶಿಸುವಂತೆ ಮೃತ ಕಾರ್ಮಿಕನ ಪತ್ನಿ ಶಾರದಮ್ಮ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದ ಶ್ರೀರಾಮಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.
ಜೆಡಿಎಸ್ ಪಕ್ಷದ ಕಚೇರಿಯ ಕಟ್ಟಡದ ನಿರ್ಮಾಣದ ವೇಳೆ 2017ರ ಮೇ 3ರಂದು ಮಣ್ಣು ಅಗೆಯುತ್ತಿದ್ದ ವೇಳೆ ನನ್ನ ಪತಿ ಕೃಷ್ಣಪ್ಪ ಮೃತಪಟ್ಟಿದ್ದಾರೆ. ಶ್ರೀರಾಮಪುರ ಠಾಣಾ ಪೊಲೀಸರು ಈ ಸಂಬಂಧ ಅಸಹಜ ಸಾವು ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು.
ಇದನ್ನು ಅಧೀನ ನ್ಯಾಯಾಲಯ ಮಾನ್ಯ ಮಾಡಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿಸಿಲ್ಲ ಹಾಗೂ ಪೊಲೀಸರು ಪ್ರಕರಣದ ಕುರಿತು ಸೂಕ್ತ ರೀತಿ ತನಿಖೆ ನಡೆಸಿಲ್ಲ. ವೈದ್ಯರು ಶವಪರೀಕ್ಷೆ ವರದಿಯಲ್ಲಿ ತಮ್ಮ ಪತಿಯ ಮೃತದೇಹದ ಹಣೆ, ಎಡ ಭುಜ ಹಾಗೂ ಕಣ್ಣಿನ ಮೇಲಿದ್ದ ಗಾಯಗಳ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಲ್ಲದೆ, ನನ್ನ ಪತಿಯು 15 ವರ್ಷಗಳಿಂದಲೂ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನದಂದು ಯಾವುದೇ ಆರೋಗ್ಯ ಸಮಸ್ಯೆಯಿರಲಿಲ್ಲ ಹಾಗೂ ದೇಹ ಸದೃಢವಾಗಿತ್ತು. ಆದರೆ, ಹಠಾತ್ತನೆ ಸಾವನ್ನಪ್ಪಿರುವುದು ಅನುಮಾನಸ್ಪದವಾಗಿದೆ.
ತಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿಯ ಸಾವನಿಂದ ನಮ್ಮ ಜೀವನಾಧಾರ ಕಳೆದು ಕೊಂಡಿದ್ದೇವೆ. ಆದ್ದರಿಂದ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕು ಹಾಗೂ ತಮಗೆ ಪರಿಹಾರ ಕಲ್ಪಿಸಲು ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.