Advertisement

ಖುದ್ದು ಹಾಜರಿಗೆ ಹೈಕೋರ್ಟ್‌ ಸೂಚನೆ

11:36 AM Oct 04, 2018 | |

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ವಿಚಾರದ ಕುರಿತಂತೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್‌.ಕೆ.ಕಾಂತಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್‌.ಎಸ್‌. ಚೌಹಾಣ್‌ ಹಾಗೂ ನ್ಯಾ. ಬಿ.ಎಂ. ಶ್ಯಾಂ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಸೂಚಿಸಿ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿತು.

ಬುಧವಾರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ 2016ರಲ್ಲಿ ಸರ್ಕಾರ ಹೈಕೊರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಈವರೆಗೆ ವರದಿ ಮಂಡನೆಯಾಗಿಲ್ಲ’ ಎಂದು ದೂರಿದರು. 

ಇದನ್ನು ಆಲಿಸಿದ ನ್ಯಾಯಪೀಠ, ಸದನದಲ್ಲಿ ಯಾಕೆ ಇಲ್ಲಿತನಕ ವರದಿ ಮಂಡನೆಯಾಗಿಲ್ಲ ಎಂಬ ಬಗ್ಗೆ ವಿವರಣೆ ನೀಡಲು ಖುದ್ದು ಹಾಜರಾಗುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು.

ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ 2012ರ ಮಾ.26ಕ್ಕೆ ಅಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ವಿಧಾನಸಭೆ
ಮತ್ತು ವಿಧಾನಪರಿಷತ್ತಿನಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 2015ರಲ್ಲಿ ಎಸ್‌.ಕೆ. ಕಾಂತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸದನದಲ್ಲಿ ವರದಿ ಮಂಡಿಸುವಂತೆ ಹೈಕೋರ್ಟ್‌ ನಿರ್ದೇಶನ ಕೊಟ್ಟಿತ್ತು. ವರದಿ ಮಂಡಿಸುವುದಾಗಿ 2016ರಲ್ಲಿ ಸರ್ಕಾರ ಮುಚ್ಚಳಿಕೆ ಸಹ ಬರೆದುಕೊಟ್ಟಿತ್ತು. ಆದರೆ, ವರದಿಯ ಶಿಫಾರಸುಗಳನ್ನು ಮಾತ್ರ ಮಂಡಿಸಿತ್ತು. ಇದನ್ನು ಆಕ್ಷೇಪಿಸಿ ಎಸ್‌.ಕೆ. ಕಾಂತಾ ಅವರು 2016ರ ಮಾರ್ಚ್‌ನಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next