Advertisement

ವಿವಾಹಿತ ಹೆಣ್ಮಕ್ಕಳು ಅಪಘಾತ ವಿಮೆ ಪರಿಹಾರಕ್ಕೆ ಅರ್ಹರು: ಹೈಕೋರ್ಟ್‌

09:55 PM Aug 12, 2022 | Team Udayavani |

ಬೆಂಗಳೂರು: “ಪರಿಹಾರ ಪಡೆದುಕೊಳ್ಳುವ ವಿಚಾರದಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ತರವಲ್ಲ ಎಂದಿರುವ ಹೈಕೋರ್ಟ್‌, ಅಪಘಾತ ಪ್ರಕರಣಗಳಲ್ಲಿ ಪೋಷಕರು ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ಸಹ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಮಹತ್ವದ ಆದೇಶ ನೀಡಿದೆ.

Advertisement

ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಹುಬ್ಬಳ್ಳಿ ಮೂಲದ ಮಹಿಳೆಯ ವಿವಾಹಿತ ಮಗಳಿಗೆ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಆದೇಶ ಪ್ರಶ್ನಿಸಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಮೃತರ ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ವಿಮಾ ಸಂಸ್ಥೆಯ ವಾದವನ್ನು ಒಪ್ಪಲು ಆಗುವುದಿಲ್ಲ. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ, ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ವಿಮಾ ಪರಿಹಾರ ಪಡೆಯಬಹುದಾಗಿದೆ ಎಂದು ಆದೇಶಿಸಿ ಮೇಲ್ಮನವಿ ವಜಾಗೊಳಿಸಿದೆ.

ನ್ಯಾಷನಲ್‌ ಇನ್‌ಶ್ಯೂರೆನ್ಸ್‌ ಲಿಮಿಟೆಡ್‌ ಮತ್ತು ಬಿರೇಂದರ್‌ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುನ್ನು ಉಲ್ಲೇಖೀಸಿರುವ ಹೈಕೋರ್ಟ್‌, ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅದರಂತೆ, ವಯಸ್ಕ, ವಿವಾಹಿತ ಹಾಗೂ ಸಂಪಾದನೆ ಮಾಡುತ್ತಿರುವ ಮಕ್ಕಳು ಸಹ ಮೃತರ ವಾರಸುದಾರರಾಗಿದ್ದಾಗ, ಅವರು ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸುವುದು ನ್ಯಾಯಾಧೀಕರಣದ ಕರ್ತವ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next