Advertisement

ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್‌ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌

09:17 PM Aug 02, 2022 | Team Udayavani |

ಬೆಂಗಳೂರು: ಕರ್ನಾಟಕ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರಕ್ಕೆ ವಿಶೇಷಾಧಿಕಾರಿಯಾಗಿ ಡಾ| ಎನ್‌. ರಾಮಕೃಷ್ಣಾ ರೆಡ್ಡಿ ಅವರನ್ನು ನೇಮಕ ಮಾಡಿದ್ದ ಸರಕಾರದ ಆದೇಶ ಪ್ರಶ್ನಿಸಿ ಸದ್ಯ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಆರೋಪಿಯಾಗಿರುವ ದಿವ್ಯಾ ಹಾಗರಗಿ 2020ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಹಾಗೂ ನ್ಯಾ| ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಆಗ ಅರ್ಜಿದಾರರ ಪರ ವಕೀಲರು, ದಿವ್ಯಾ ಹಾಗರಗಿಯವರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎನ್ನುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಜುಲೈ 18ರಂದು ನ್ಯಾಯಾಲಯ ನೀಡಿದ್ದ ಆದೇಶದಂತೆ ಪ್ರಮಾಣಪತ್ರ ಸಿದ್ಧವಾಗಿದೆ. ಅದನ್ನು ಕೋರ್ಟ್‌ಗೆ ಸಲ್ಲಿಸಲು ಕಾಲಾವಕಾಶಬೇಕು ಎಂದು ಕೋರಿದರು.

ಅದಕ್ಕೆ ಅಸಮಧಾನಗೊಂಡ ನ್ಯಾಯಪೀಠ, ಪಿಎಸ್‌ಐ ನೇಮಕ ಅಕ್ರಮದಲ್ಲಿ ಆರೋಪಿಯಾಗಿರುವ ನಿಮ್ಮ ಕಕ್ಷಿದಾರರ ಅರ್ಜಿಯನ್ನು ನ್ಯಾಯಾಲಯ ಏಕೆ ಪರಿಗಣಿಸಬೇಕು ಎಂದು ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಅರ್ಜಿದಾರೆ ತಾನು ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ ನಾಮನಿರ್ದೇಶಿತ ಸದಸ್ಯೆಯಾಗಿದ್ದು, ನರ್ಸ್‌ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ 2022ರ ಎಪ್ರಿಲ್‌ನಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಇನ್ನೂ ಪ್ರಾಧಿಕಾರದ ವಿಶೇಷಾಧಿಕಾರಿ ಹುದ್ದೆಯಿಂದ ರಾಮಕೃಷ್ಣ ರೆಡ್ಡಿ ಅವರನ್ನು ವಜಾಗೊಳಿಸಲು ಅರ್ಜಿಯಲ್ಲಿ ಕೋರಿಲ್ಲ. ಮೇಲಾಗಿ ಇದು ಸೇವಾ ವಿಷಯ (ಸರ್ವಿಸ್‌ ಮ್ಯಾಟರ್‌) ಆಗಿದ್ದು, ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ ಎಂದು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next