Advertisement

ಭೂಕುಸಿತ, ಭೂಕಂಪನ ಕಾರಣ ಪತ್ತೆಗೆ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

10:09 PM Jul 23, 2022 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪದೇ ಪದೆ ಭೂಕುಸಿತ ಮತ್ತು ಭೂಕಂಪನ ಆಗುತ್ತಿರುವುದಕ್ಕೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ವಿಶೇಷ ತಂಡ ರಚಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ವಿಚಾರವಾಗಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾ| ಆಲೋಕ್‌ ಆರಾಧೆ ಹಾಗೂ ನ್ಯಾ| ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠವು ಸರಕಾರ ಹಾಗೂ ಕೊಡಗು ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿತು. ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಸೂಚಿಸಿದ ನ್ಯಾಯಪೀಠ, ಕೊಡಗಿನ ಸಮಸ್ಯೆ ಬಗೆಹರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ನಿರ್ದೇಶನ ನೀಡಿ, ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌ ವಾದ ಮಂಡಿಸಿ, 2018ರಲ್ಲಿ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಾಣ ಮತ್ತು ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿತು. ಆದಾದ ನಂತರ ಪ್ರತಿವರ್ಷವೂ ಜಿಲ್ಲೆಯಾದ್ಯಂತ ಭೂ ಕುಸಿತ ಮತ್ತು ಭೂಕಂಪನಗಳು ಹೆಚ್ಚಾಗುತ್ತಿವೆ, ಜೀವ ಹಾಗೂ ಆಸ್ತಿ-ಪಾಸ್ತಿ ಹಾನಿ ಪ್ರತಿವರ್ಷವೂ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ, ಕೊಡಗು ಜಿಲ್ಲೆಯಲ್ಲಿ ಹಾನಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ 2020ರಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದರು.

ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಭೂಕಂಪ ಮತ್ತು ಭೂ ಕುಸಿತಕ್ಕೆ ಕಾರಣಗಳನ್ನು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ ಮತ್ತೆ ಇದೀಗ ಭೂಕಂಪನಗಳು ಆಗುತ್ತಿವೆ. ಮಳೆಗಾಲದಲ್ಲಿ ಪ್ರವಾಹ, ಭೂ ಕುಸಿತದ ನಡುವೆ ಭೂಮಿಯ ಕಂಪನ ಮುಂವರಿದಿದ್ದು ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಭೂಕುಸಿತ, ಭೂಕಂಪನಗಳ ಹೆಚ್ಚಳಕ್ಕೆ ಅಕ್ರಮ ರೆಸಾರ್ಟ್‌ ಹಾಗೂ ಗಣಿಗಾರಿಕೆಯೇ ಕಾರಣವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕಂದು ಕೋರಿದರು.

Advertisement

ಅಲ್ಲದೆ, ಮತ್ತೆ ಮತ್ತೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ, ಇಡೀ ಜಿಲ್ಲೆಯ ಪರಿಸರದ ಮೇಲೂ ಪರಿಣಾಮಗಳಾಗುತ್ತಿವೆ. ಆದರೂ ಸರ್ಕಾರ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಕಂಡುಹಿಡಿಯಲು ಮುಂದಾಗುತ್ತಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next