Advertisement

ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ: ಎಸಿಬಿ ಕಾರ್ಯವೈಖರಿ ಪ್ರಶ್ನಿಸಿದ್ದು ಕಾರಣ

11:33 PM Jul 04, 2022 | Team Udayavani |

ಬೆಂಗಳೂರು: “ಭ್ರಷ್ಟಾ ಚಾರ ನಿಗ್ರಹ ದಳ’ (ಎಸಿಬಿ) ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ ನ್ಯಾಯ ಮೂರ್ತಿಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಹಾಕಲಾಗಿದೆ’ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಯೇ ಹೇಳಿದ್ದಾರೆ.

Advertisement

ಲಂಚ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್‌ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ| ಎಚ್‌.ಪಿ. ಸಂದೇಶ್‌, ತಮಗೆ ವರ್ಗಾವಣೆ ಬೆದರಿಕೆ ಬಂದಿರುವ ಬಗ್ಗೆ ಕಲಾಪದಲ್ಲೇ ಹೇಳಿಕೊಂಡಿದ್ದಾರೆ.

ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ಬೇರೆ ಜಿಲ್ಲೆಗೆ ವರ್ಗಾಯಿಸ ಲಾಗಿದೆ ಎಂದು ಹೇಳುವ ಮೂಲಕ ನನಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬಾ ಪವರ್‌ ಫ‌ುಲ್‌ ಅಂತೆ ಎಂದು ವ್ಯಕ್ತಿಯೊಬ್ಬರು
ನೀಡಿದ ಮಾಹಿತಿ ಆಧರಿಸಿ ನನ್ನ ಸಹೋದ್ಯೋಗಿಯೊಬ್ಬರು ನನಗೆ ವರ್ಗಾವಣೆ ಬೆದರಿಕೆ ಇರುವ ಬಗ್ಗೆ ತಿಳಿಸಿದ್ದಾರೆ. ಏನಾಗುತ್ತದೋ ಆಗಲಿ. ವರ್ಗಾವಣೆ ಬೆದರಿಕೆ ಇರುವ ಬಗ್ಗೆ ಹೇಳಿರುವ ನ್ಯಾಯಮೂರ್ತಿಗಳ ಹೆಸರನ್ನೇ ಉಲ್ಲೇಖೀಸಿ ಆದೇಶ ಬರೆಸುತ್ತೇನೆ ಎಂದರು.

ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ. ನ್ಯಾಯಾಂಗವನ್ನು ಬೆದರಿಸಿದರೆ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ನನ್ನ ಹುದ್ದೆಯನ್ನು ಬಲಿ ಕೊಟ್ಟಾದರೂ ನ್ಯಾಯಾಂಗದ ಘನತೆ ಮತ್ತು ಸಾರ್ವ ಜನಿಕರ ಹಿತವನ್ನು ಕಾಪಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣವು ಜೂ.29ರಂದು ವಿಚಾರಣೆ ಬಂದಿದ್ದಾಗ, ಎಸಿಬಿ ಕಚೇರಿಗಳು “ವಸೂಲಿ ಕೇಂದ್ರ’ಗಳಾ ಗಿವೆ. ಸ್ವತಃ ಎಸಿಬಿ ಎಡಿಜಿಪಿ ಕಳಂಕಿತ ಅಧಿಕಾರಿಯಾಗಿದ್ದಾರೆ. ದೊಡ್ಡ ದೊಡ್ಡ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನ ಹಿಡಿಯುವುದನ್ನು ಬಿಟ್ಟು ಗುಮಾಸ್ತರನ್ನು ಎಸಿಬಿ ಹಿಡಿಯುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯ ಮೂರ್ತಿಗಳು, ಎಷ್ಟು ಭ್ರಷ್ಟಾ ಚಾರ ಪ್ರಕರಣಗಳಲ್ಲಿ ಎಸಿಬಿ ದಾಳಿ ನಡೆಸಿದೆ? 2016ರಿಂದ ಈವರೆಗೆ ಎಷ್ಟು ಅಧಿಕಾರಿಗಳ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಸಿದೆ ಎಂಬ ಬಗ್ಗೆ ವಸ್ತುಸ್ಥಿತಿ ವರದಿ ನೀಡಬೇಕು. ಸ್ವತಃ ಕಳಂಕಿತ ವ್ಯಕ್ತಿಯಾಗಿರುವ ಎಸಿಬಿ ಎಡಿಜಿಪಿಯ “ಸರ್ವಿಸ್‌ ರೆಕಾರ್ಡ್‌’ ಹಾಜರುಪಡಿಸಲು ತಿಳಿಸಿದ್ದರು.

Advertisement

ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ, ಎಸಿಬಿ ರಚನೆಯನ್ನು ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠದಲ್ಲಿ ಪ್ರಕರಣ ವಿಚಾರಣೆಗೆ ಇದೆ. ಅಲ್ಲಿ ಬಿ ರಿಪೋರ್ಟ್‌ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದರು.
ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ವಿಭಾಗೀಯ ನ್ಯಾಯಪೀಠಕ್ಕೆ ಮಾಹಿತಿ ಕೊಟ್ಟರೆ, ಏಕಸದಸ್ಯ ನ್ಯಾಯಪೀಠಕ್ಕೆ ಕೊಡ ಬಾರದೆಂದು ನಿರ್ಬಂಧ ಇದೆಯೇ ಎಂದು ಎಸಿಬಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಭ್ರಷ್ಟಾಚಾರದಲ್ಲಿ ರಾಜ್ಯ ಹೊತ್ತಿ ಉರಿತಿದೆ
ನೂಪುರ್‌ ಶರ್ಮಾ ಪ್ರಕರಣದಲ್ಲಿ “ದೇಶವೇ ಹೊತ್ತಿ ಉರಿಯುತ್ತಿದೆ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅದನ್ನೇ ನಾನು ಇಲ್ಲಿ ಕೇಳುತ್ತಿದ್ದೇನೆ, ರಾಜ್ಯವೇ ಭ್ರಷ್ಟಾಚಾರದಲ್ಲಿ ಹೊತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ? ಎಸಿಬಿ ಯಾರನ್ನು ರಕ್ಷಿಸಲು ಹೊರಟಿದೆ? ಸರಕಾರ ಏನು ಮಾಡುತ್ತಿದೆ. ಭ್ರಷ್ಟಾಚಾರ ಎಂಬ ಕ್ಯಾನ್ಸರ್‌ 2ನೇ ಹಂತದಲ್ಲಿದೆ. ಇದು 3 ಅಥವಾ ನಾಲ್ಕನೇ ಹಂತ ತಲುಪುವ ಮೊದಲು ಗುಣಪಡಿಸಬೇಕಿದೆ. ನನ್ನ ಮಾತುಗಳು ಕಠೊರವಾಗಿ ಅನಿಸುತ್ತಿರಬಹುದು. ಆದರೆ, ಈಗ ಕಾಲ ಬಂದಿದೆ, ಏನಾದರೂ ಮಾಡಲೇಬೇಕು ಎಂದು ನ್ಯಾ| ಸಂದೇಶ್‌ ಹೇಳಿದರು.

ಬಿ ರಿಪೋರ್ಟ್‌ ಮಾಹಿತಿಗೆ 2 ದಿನ ಗಡುವು
ಮಧ್ಯಾಹ್ನದೊಳಗೆ ಕಳಂಕಿತ ಎಸಿಬಿ ಎಡಿಜಿಪಿಯ ಸರ್ವಿಸ್‌ ರೆಕಾರ್ಡ್‌ ಹಾಗೂ ಬಿ ರಿಪೋರ್ಟ್‌ ಬಗ್ಗೆ ಮಾಹಿತಿ ಕೊಡಬೇಕು ಎಂದರು. ಮಧ್ಯಾಹ್ನ 2.30ಕ್ಕೆ ಡಿಪಿಆರ್‌ ಕಾರ್ಯದರ್ಶಿ ಖುದ್ದು ಹಾಜರಿರಬೇಕು ಎಂದು ತಾಕೀತು ಮಾಡಿದರು. ಮಧ್ಯಾಹ್ನ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಹಾಜರಾಗಿ, ತಮ್ಮ ಆದೇಶವನ್ನು ಸರಕಾರ ಪಾಲಿಸಲಿದೆ. ದಯ ವಿಟ್ಟು ಬೇಸರಿಸಬೇಡಿ ಎಂದರು. ಬಳಿಕ ರಾಜ್ಯದಲ್ಲಿ ಅಧಿಕಾರಿಗಳ ದರ್ಬಾರ್‌ ನಡೆಯತ್ತಿದೆ ಎಂದು ಚಾಟಿ ಬೀಸಿ, ಬಿ ರಿಪೋರ್ಟ್‌ ಬಗ್ಗೆ ಮಾಹಿತಿ ಸಲ್ಲಿಕೆಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಲಾಯಿತು.

ನಾನು ಯಾರದ್ದೇ ಕೈಕಾಲು ಹಿಡಿದು ಜಡ್ಜ್ ಆಗಿಲ್ಲ. ಸು.ಕೋರ್ಟಿಗೆ ಹೋಗಬೇಕೆಂಬ ಆಸೆಯೂ ಇಲ್ಲ. ಜಡ್ಜ್ ಆದ ಮೇಲೆ ಒಂದಿಂಚೂ ಆಸ್ತಿ ಮಾಡಿಲ್ಲ. ಬದಲಿಗೆ ಅಪ್ಪ ಮಾಡಿದ ನಾಲ್ಕು ಎಕ್ರೆ ಆಸ್ತಿ ಮಾರಿದ್ದೇನೆ. ಬೆದರಿಕೆಗಳಿಗೆಲ್ಲ ಜಗ್ಗುವುದಿಲ್ಲ. ಇಲ್ಲಿ ಬಿಟ್ಟರೆ ಊರಲ್ಲಿ ಗದ್ದೆ ಉಳುತ್ತೇನೆ. ನಾನು ಯಾವ ರಾಜಕೀಯ ಪಕ್ಷಕ್ಕೂ, ಸಿದ್ದಾಂತಕ್ಕೂ ಸೇರಿದವನಲ್ಲ. ನನ್ನ ಬದ್ಧತೆ ಸಂವಿಧಾನಕ್ಕಷ್ಟೇ ಇರುವುದು. ನ್ಯಾಯಾಂಗದ ಸ್ವಾಯತ್ತತೆ ಎತ್ತಿಹಿಡಿಯುತ್ತೇನೆ, ಜನರ ಹಿತ ಕಾಪಾಡುತ್ತೇನೆ’.
-ನ್ಯಾ| ಎಚ್‌.ಪಿ. ಸಂದೇಶ್‌

Advertisement

Udayavani is now on Telegram. Click here to join our channel and stay updated with the latest news.

Next