ಬೆಂಗಳೂರು: ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರ ತಾಯಿ ಹೆಸರಿನಲ್ಲಿ ಸರಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸರಕಾರದ ನಿವೃತ್ತ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ಪಡೆಯಲು ವಿಳಂಬ ಮಾಡಿದ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಒಂದು ಲಕ್ಷ ರೂ.ದಂಡ ವಿಧಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದಪಡಿಸುವಂತೆ ಕೋರಿ ಆರೋಪಿ ಬೆಂಗಳೂರಿನ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಆಗಿರುವ ಡಿ.ಬಿ. ಗಂಗಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರಕಾರಕ್ಕೆ ದಂಡ ವಿಧಿಸಿದೆ.
ಸರಕಾರವು ಒಂದು ವಾರದಲ್ಲಿ ದಂಡ ಮೊತ್ತವನ್ನು ಠೇವಣಿ ಇಡಬೇಕು. ಆ ಹಣವನ್ನು ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ಕೇಂದ್ರದ ರಾಜ್ಯ ಸಿಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ರವಾನಿಸದ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಒಂದು ವೇಳೆ ದಂಡ ಮೊತ್ತವನ್ನು ಪಾವತಿಸದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರಗಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.