ಬೆಂಗಳೂರು: ಒಂದೇ ಕುಟುಂಬದ 8 ಮಂದಿ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣದಲ್ಲಿ ನಮ್ಮ ವಿರುದ್ಧ ದಾವಣಗೆರೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ಕೋರ್ಟ್ ನಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದು ಗೊಳಿಸಬೇಕು ಎಂದು ಕೋರಿ ಚಿತ್ರದುರ್ಗದ ನಿವಾಸಿ ಮೊಹಮದ್ ಶಮೀರ್ ಸೇರಿದಂತೆ ಪರಿವಾರದ ಎಂಟು ಜನರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಅರ್ಜಿದಾರರ ವಿರುದ್ಧ ಶಮೀರ್ ಪತ್ನಿ ಡಿ.ಎನ್. ಜಾಸ್ಮಿನ್ ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ವರದಕ್ಷಿಣೆ ತಡೆ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಸುವಾಗ ಮುಂದೇನಾಗುತ್ತದೆ ಎನ್ನುವುದರ ಪರಿಣಾಮಗಳನ್ನು ಫಿರ್ಯಾದುದಾರ ಪತ್ನಿ ಸರಿಯಾಗಿ ಅವ ಲೋಕಿಸಿಲ್ಲ ಎಂದು ನ್ಯಾಯಪೀಠ ಅಭಿ ಪ್ರಾಯಪಟ್ಟು ಪ್ರಕರಣ ವಜಾಗೊಳಿಸಿದೆ. ಶಮೀರ್ ಮತ್ತು ಕುಟುಂಬದ ಸದಸ್ಯರ ಪರ ಹಿರಿಯ ವಕೀಲ ಹಷ್ಮತ್ ಪಾಷ ವಾದ ಮಂಡಿಸಿದ್ದರು.
ಟಿಡಿಪಿ ಶಾಸಕನ ಅರ್ಜಿ ವಜಾ
ಬೆಂಗಳೂರು: ಆರ್ಥಿಕ ಅಪರಾಧ ಪ್ರಕರಣದಲ್ಲಿ ಬಂಧನದಲ್ಲಿರುವ ತೆಲುಗು ದೇಶಂ ಪಕ್ಷದ ವಿಧಾನ ಪರಿಷತ್ ಸದಸ್ಯ ವಕಟಿ ನಾರಾಯಣ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಆರ್ಥಿಕ ಅಪರಾಧಗಳಡಿ ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ವಕಟಿ ನಾರಾಯಣ ರೆಡ್ಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
Related Articles
ರೆಡ್ಡಿ ಬೆಂಗಳೂರಿನ ಭಾರತೀಯ ಕೈಗಾರಿಕಾ ಹಣಕಾಸು ನಿಗಮದಿಂದ 2014-15ರಲ್ಲಿ 190 ಕೋಟಿ ರೂ. ಸಾಲ ಮಂಜೂರು ಮಾಡಿಸಿಕೊಂಡು ಮರುಪಾವತಿ ಮಾಡಿಲ್ಲ. ಇದರಿಂದ ಬೊಕ್ಕಸಕ್ಕೆ 205 ಕೋಟಿ ರೂ. ವಂಚನೆ ಆಗಿದೆ ಎಂಬುದು ಸಿಬಿಐ ಆರೋಪ. ಸಿಬಿಐ ಪರ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ
ಶಾಸಕರ ವಿರುದ್ಧದ ಪ್ರಕರಣಕ್ಕೆ ತಡೆ
ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪ ಸಂಬಂಧ ಕುಣಿಗಲ್ ಶಾಸಕ ಡಾ| ರಂಗನಾಥ್ ವಿರುದ್ಧದ ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಕರಣ ಕುರಿತಂತೆ ತಮ್ಮ ವಿರುದ್ಧದ ಕುಣಿಗಲ್ ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಶಾಸಕ ರಂಗನಾಥ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.