Advertisement

High Court; ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ ಮೇಲಿನ ಪ್ರಕರಣಕ್ಕೆ ಮಧ್ಯಾಂತರ ತಡೆ

11:22 PM Mar 24, 2024 | Team Udayavani |

ಬೆಂಗಳೂರು: ಮಂಗಳೂರಿನ ಸಂತ ಜೆರೋಸಾ ಶಾಲೆಯಲ್ಲಿ ಹಿಂದೂ ದೇವರಿಗೆ ಅಪಮಾನ ಎಸಗಲಾಗಿದೆ ಎಂದು ಆರೋಪಿಸಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದ ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಸೇರಿದಂತೆ ಐವರ ವಿರುದ್ಧದ ಪೊಲೀಸ್‌ ತನಿಖೆಗೆ ರಾಜ್ಯ ಹೈಕೋರ್ಟ್‌ ತಡೆ ನೀಡಿ ಮಧ್ಯಾಂತರ ಆದೇಶ ನೀಡಿದೆ.

Advertisement

ಈ ಪ್ರಕರಣದಲ್ಲಿ ನಮ್ಮನ್ನು ರಾಜಕೀಯ ಕಾರಣಕ್ಕಾಗಿ, ಕಿರುಕುಳ ನೀಡುವುದು ಮತ್ತು ಅಪಮಾನಿಸುವ ಉದ್ದೇಶದಿಂದ ಸಿಲುಕಿಸಲಾಗಿದ್ದು, ಹಾಗಾಗಿ ಪ್ರಕರಣದ ಎಫ್ಐಆರ್‌ ರದ್ದುಪಡಿಸಬೇಕು ಎಂದು ಕೋರಿ ವೇದವ್ಯಾಸ್‌ ಕಾಮತ್‌ ಮತ್ತಿತರರು ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ದೀಕ್ಷಿತ್‌ ಅವರ ಏಕಸದಸ್ಯ ನ್ಯಾಯಪೀಠ, ದೂರುದಾರರ ಅರ್ಜಿಯನ್ನು ಪುರಸ್ಕರಿಸಿ ರಾಜ್ಯ ಸರಕಾರ ಮತ್ತು ಪ್ರತಿವಾದಿ ಅನಿಲ್‌ ಜೆರಾಲ್ಡ್‌ ಲೋಬೋ ಅವರಿಗೆ ನೋಟಿಸ್‌ ಜಾರಿಗೊಳಿಸಿತು.

ದೂರುದಾರರ ಪರ ವಾದಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು, ಜೆರೋಸಾ ಸಂಸ್ಥೆಯು ಹಿಂದೂ ದೇವರ ಅವಹೇಳನ ಮಾಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದ ಶಿಕ್ಷಕಿ ಪ್ರಭಾ ಅವರನ್ನು ವಜಾಗೊಳಿಸಿತ್ತು. ಹಾಗೆಯೇ ಶಾಲೆಯ ಆಡಳಿತ ಮಂಡಳಿ ಆರೋಪಿಗಳ ಮೇಲೆ ಯಾವುದೇ ದೂರು ನೀಡಿಲ್ಲ. ಬದಲಾಗಿ ಪೋಷಕರೊಬ್ಬರು ದೂರು ನೀಡಿದ್ದಾರೆ. ಘಟನೆ ನಡೆದ ಎರಡು ದಿನದ ಬಳಿಕ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ. ಕೋಮು ದ್ವೇಷ ಹರಡುವ ಯಾವುದೇ ಚಟುವಟಿಕೆಯನ್ನು ಆರೋಪಿಗಳು ಮಾಡಿಲ್ಲ ಎಂದು ವಾದಿಸಿದರು.

ಘಟನೆಯ ಹಿನ್ನೆಲೆ
ಫೆ. 12ರಂದು ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪ್ರಭಾ ಹಿಂದೂ ದೇವರ ಅವಹೇಳನ ಮಾಡಿದ್ದಾರೆ ಎಂಬ ಆಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅವರ ವರ್ತನೆ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಪ್ರಭಾ ಅವರನ್ನು ಸಂಸ್ಥೆ ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವೇದವ್ಯಾಸ್‌ ಕಾಮತ್‌, ಭರತ್‌ ಶೆಟ್ಟಿ, ಶರಣ್‌ ಪಂಪ್‌ವೆಲ್‌, ಸಂದೀಪ್‌ ಗರೋಡಿ ಮತ್ತು ಭರತ್‌ ಕುಮಾರ್‌ ಅವರ ಮೇಲೆ ಎಫ್ಐಆರ್‌ ದಾಖಲಿಸಲಾಗಿತ್ತು. ಈ ಎಫ್ಐಆರ್‌ ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next